fbpx
ಸಮಾಚಾರ

ಕೊನೆಗೂ ‘ವಿಕ್ರಮ್’ ಲ್ಯಾಂಡರ್ ಪತ್ತೆ ಹಚ್ಚಿದ ಇಸ್ರೋ: ಸಂಪರ್ಕ ಸಾಧಿಸಲು ಹರಸಾಹಸ!

ಚಂದ್ರಯಾನ-2 ಯೋಜನೆಯ ಹಿನ್ನಡೆಯಿಂದಾಗಿ ನಿರಾಸೆಯಲ್ಲಿದ್ದ ಇಸ್ರೋ, ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್’ನ್ನು ಪತ್ತೆ ಹಚ್ಚಿ ಹೊಸ ಆಶಾವಾದ ಮೂಡಿಸಿದೆ. ಹೌದು, ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್’ನ ಸ್ಥಳವನ್ನು ಇಸ್ರೋ ಪತ್ತೆ ಹಚ್ಚಿದೆ. ಚಂದ್ರಯಾನ-2 ನೌಕೆಯ ಆರ್ಬಿಟರ್ ಕ್ಯಾಮರಾದಲ್ಲಿ ವಿಕ್ರಮ್ ಲ್ಯಾಂಡರ್ ಸೆರೆಯಾಗಿದೆ.

 

 

ಆದರೆ ಇದೂವರೆಗೂ ವಿಕ್ರಮ್ ಲ್ಯಾಂಡರ್ ಸಂಪರ್ಕ ಸಾಧ್ಯವಾಗಿಲ್ಲ. ಸಂಪರ್ಕಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ತಂಡ ವಿಕ್ರಮ್ ಲ್ಯಾಂಡರ್ ಸಂಪರ್ಕಿಸಲು ನಿರಂತರವಾಗಿ ಶ್ರಮಿಸುತ್ತಿದ್ದು, ಶೀಘ್ರದಲ್ಲಿಯೇ ಸಂಪರ್ಕ ಸಾಧ್ಯವಾಗಲಿದೆ ಎಂದು ಶಿವನ್ ಭರವಸೆ ನೀಡಿದ್ದಾರೆ.

ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಿರೋದು ಪತ್ತೆಯಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ. ಸದ್ಯ ಆರ್ಬಿಟರ್ ಸೆರೆ ಹಿಡಿದಿರುವ ವಿಕ್ರಮ್ ಲ್ಯಾಂಡರ್ ನ ಫೋಟೋಗಳು ಹಾಗೂ ಮಾಹಿತಿಯನ್ನು ಪರಿಶೀಲನೆ ನಡೆಸುತ್ತೇವೆ. ಆದಷ್ಟು ಬೇಗ ವಿಕ್ರಮ್ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ ಮುಂಜಾನೆ 1.30ರ ಸುಮಾರಿಗೆ ಚಂದಿರನ್ನು ಸುತ್ತುತ್ತಿದ್ದ ಆರ್ಬಿಟರ್‌ನಿಂದ ವಿಕ್ರಮ್ ಲ್ಯಾಂಡರ್ ಬೇರ್ಪಟ್ಟಿತ್ತು. ನಿಧಾನವಾಗಿ ಚಂದ್ರನ ಮೇಲ್ಮೈನತ್ತ ಪ್ರಯಾಣ ಬೆಳೆಸಿತ್ತು. ಆದರೆ, ಚಂದಿರ ಮೇಲ್ಮೈ ತಲುಪಲು ಕೇವಲ 2.1 ಕಿ.ಮೀ ದೂರದಲ್ಲಿದ್ದಾಗ, ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸೂಕ್ತ ರೀತಿಯಲ್ಲಿ ಲ್ಯಾಂಡ್ ಆಗಿದೆಯೇ ಅಥವಾ ಬಿದ್ದು ಹೋಗಿದೆಯೇ ಎಂಬ ಮಾಹಿತಿ ಈವರೆಗೂ ಸಿಕ್ಕಿರಲಿಲ್ಲ. ಇದೀಗ ಲ್ಯಾಂಡರ್‌ನ ಛಾಯಾಚಿತ್ರವಂತೂ ಇಸ್ರೋಗೆ ಸಿಕ್ಕಿದೆ. ಮುಂದಿನ ಹಂತದಲ್ಲಿ ಲ್ಯಾಂಡರ್ ಜೊತೆ ಇಸ್ರೋಗೆ ಸಂಪರ್ಕ ಸಾಧ್ಯವಾದ್ರೆ, ವಿಕ್ರಮ್ ಲ್ಯಾಂಡರ್‌ನ ಸ್ಥಿತಿಗತಿ ತಿಳಿದುಬರಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top