fbpx
ಸಮಾಚಾರ

“ನಿಮಗೆ 10 ಸಾವಿರ ಕೊಟ್ಟಿದ್ದೇ ಜಾಸ್ತಿ ಆಯ್ತು” ನೆರೆ ಸಂತ್ರಸ್ತರ ಮೇಲೆ ಸಚಿವ ಈಶ್ವರಪ್ಪ ದರ್ಪ!

ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನರ ಬದುಕು ಬೀದಿಗೆ ಬಿದ್ದಿದೆ. ನೆರೆ ಸಂತ್ರಸ್ತರು ಸರ್ಕಾರದಿಂದ ಪರಿಹಾರ ಕೋರುತ್ತಿದ್ದಾರೆ. ಆದರೆ ನೆನ್ನೆ ಚಿಕ್ಕೋಡಿಗೆ ಭೇಟಿ ನೀಡಿದ್ದ ಸಚಿವ ಈಶ್ವರಪ್ಪ ಪ್ರವಾಹ ಸಂತ್ರಸ್ತರ ಮೇಲೆ ಉದ್ದಟತನ ತೋರಿದ್ದಾರೆ. ಸಚಿವ ಈಶ್ವರಪ್ಪ ಕೃಷ್ಣಾ ನದಿ ತೀರದ ಸಂತ್ರಸ್ತರ ಭೇಟಿಗೆ ಬಂದಿದ್ದರು. ಚಿಕ್ಕೋಡಿಯ ಯಡೂರು ಗ್ರಾಮದ ಸಂತ್ರಸ್ತರು ಪರಿಹಾರ ಕೇಳಿದ್ದಕ್ಕೆ, ನಿಮಗೆ 10 ಸಾವಿರ ಕೊಟ್ಟಿದ್ದೇ ಜಾಸ್ತಿ ಎಂದು ಹೇಳಿ ಜನರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.

ಯಡೂರ ಗ್ರಾಮದಲ್ಲಿಸಚಿವ ಈಶ್ವರಪ್ಪ ಸಂತ್ರಸ್ತರ ಅಹವಾಲು ಕೇಳುತ್ತಿದ್ದ ಸಂದರ್ಭದಲ್ಲಿಸಂತ್ರಸ್ತರೊಬ್ಬರು ”ಸರಕಾರ ನೀಡುವ 10 ಸಾವಿರ ರೂ. ಪರಿಹಾರ ಯಾವುದಕ್ಕೂ ಸಾಲುವುದಿಲ್ಲ” ಎಂದರು. ಇದರಿಂದ ಸಿಡಿಮಿಡಿಗೊಂಡ ಈಶ್ವರಪ್ಪ, ”10 ಸಾವಿರ ರೂ. ಪರಿಹಾರ ಕೊಟ್ಟಿದ್ದೇ ಹೆಚ್ಚಾಯ್ತು” ಎಂದಿದ್ದಾರೆ.

ಈಶ್ವರಪ್ಪನವರ ಈ ದರ್ಪದ ಮಾತುಗಳನ್ನು ಕೇಳುತ್ತಿದ್ದಂತೆ ಸಂತ್ರಸ್ತರು ಧಿಕ್ಕಾರ ಕೂಗಿದರಲ್ಲದೆ ಸಚಿವರ ಕಾರಿಗೆ ಗುದ್ದಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸ್ಥಳದಲ್ಲಿಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಜನರನ್ನು ಚದುರಿಸಿ ಸಚಿವರನ್ನು ಕಾರು ಹತ್ತಿಸಿ ಕಳುಹಿಸಿದರು.

ಆದರೆ ಈಶ್ವರಪ್ಪ ಅವರು ತಾವು ಈ ರೀತಿ ಹೇಳಿಕೆ ನೀಡಿಲ್ಲ ಎಂದು ಆರೋಪಗಳನ್ನು ತಳ್ಳಿಹಾಕಿದ್ದಾರೆ. ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಎಲ್ಲ ಹಳ್ಳಿಗಳಿಗೂ ರಾಜ್ಯ ಸರ್ಕಾರದಿಂದ ತಾತ್ಕಾಲಿಕ ಪರಿಹಾರವಾಗಿ 10 ಸಾವಿರ ರೂ. ನೀಡಲಾಗಿದೆ. ಈ ಬಗ್ಗೆ ಸಂತ್ರಸ್ತರು ಸಂತಸ ಪಡುತ್ತಿದ್ದಾರೆ. ಹಗಲು ರಾತ್ರಿ ಶ್ರಮಪಟ್ಟು ಅಧಿಕಾರಿಗಳು ಜನರಿಗೆ ಊಟ ಮತ್ತು ವಸತಿ ಕಲ್ಪಿಸುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top