fbpx
ಸಮಾಚಾರ

ಪಬ್‍ಜಿ ಆಡಲು ನೆಟ್ ಪ್ಯಾಕ್‍ಗೆ ಹಣ ನೀಡದ್ದಕ್ಕೆ ತಂದೆಯ ರುಂಡ, ಕಾಲು ಕತ್ತರಿಸಿದ ಮಗ!

ಇತ್ತೀಚಿನ ದಿನಗಳಲ್ಲಿ ಯುವಜನತೆ ಆನ್​ಲೈನ್​ ಗೇಮ್​ಗಳ ಗೀಳನ್ನು ಹೆಚ್ಚಾಗಿ ಅಂಟಿಸಿಕೊಳ್ಳಲಾರಂಭಿಸಿದ್ದಾರೆ. ಕೆಲವರಂತೂ ಇದನ್ನೇ ಚಟವನ್ನಾಗಿಸಿಕೊಂಡು ದಿನದ ಬಹುತೇಕ ಸಮಯ ಅದರಲ್ಲೇ ಕಳೆಯುತ್ತಿದ್ದಾರೆ. ಪಬ್​ಜಿ ಗೇಮ್​ ಆಡುವುದು ಸಹ ಅಂತ ಒಂದು ಗೀಳಾಗಿದೆ. ಇದನ್ನು ಗೀಳಾಗಿ ಮಾಡಿಕೊಂಡಿದ್ದ ಯುವಕನೊಬ್ಬನಿಗೆ ಗೇಮ್​ ಆಡದಂತೆ ಬುದ್ದಿವಾದ ಹೇಳಿದ ತಪ್ಪಿಗೆ ತಂದೆಯೇ ಬಲಿಯಾಗಿದ್ದಾರೆ.

ಪಬ್-ಜಿ ಗೇಮ್ ಆಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಮಗನೇ ತನ್ನ ತಂದೆಯ ಕೈಕಾಲು ಹಾಗೂ ರುಂಡವನ್ನು ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸಿದ್ದೇಶ್ವರ ನಗರದಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಕಾಕತಿಯ ನಿವಾಸಿ ಶಂಕ್ರಪ್ಪಾ ಕಮ್ಮಾರ(59) ಅವರನ್ನು ರಘುವೀರ್ ಕಮ್ಮಾರ(21) ಕೊಲೆ ಮಾಡಿದ್ದಾನೆ.

ಮಗ ಪಬ್‍ಜಿ ಆಟಕ್ಕೆ ಹೆಚ್ಚು ಅಡಿಕ್ಟ್ ಆಗಿದ್ದ ಕಾರಣಕ್ಕೆ ತಂದೆ ಹಲವು ಬಾರಿ ಆತನಿಗೆ ಆಡದಂತೆ ಬುದ್ಧಿ ಹೇಳಿದ್ದರು. ಆದರೆ ಮಗ ಮಾತ್ರ ಯಾರ ಮಾತಿಗೂ ಬೆಲೆ ಕೊಡದೆ ಪಬ್‍ಜಿ ಆಡಿಕೊಂಡು ಅದರಲ್ಲೇ ಮುಳುಗಿದ್ದನು. ಇನ್ನು ರಘುವೀರ್​ ಪಬ್​ಜಿ ಆಡುತ್ತಿದ್ದಾಗ ತಂದೆ ಶಂಕ್ರಪ್ಪ ಬೈದಿದ್ದರು. ಇದರಿಂದ ಕೋಪಗೊಂಡ ರಘುವೀರ್​ ತಾಯಿಯನ್ನ ರೂಮ್​​ನಲ್ಲಿ ಲಾಕ್ ಮಾಡಿ, ತಂದೆಯನ್ನ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅಲ್ಲದೆ ಕೊಲೆ ಮಾಡಿದ ನಂತರ ತಲೆ ಹಾಗೂ ಕಾಲನ್ನ ಕಟ್​ ಮಾಡಿ ಕ್ರೌರ್ಯ ಮೆರೆದಿದ್ದಾನೆ.

ಭಾನುವಾರ ರಘುವೀರ್ ನ ಮೊಬೈಲ್‍ನಲ್ಲಿ ಇಂಟರ್‌ನೆಟ್ ಪ್ಯಾಕ್ ಖಾಲಿಯಾಗಿತ್ತು. ಆದ್ದರಿಂದ ಪ್ಯಾಕ್ ಹಾಕಿಕೊಳ್ಳಲು ಆತ ತಂದೆ ಬಳಿ ಹಣ ಕೇಳಿದ್ದನು. ಆದರೆ ತಂದೆ ಹಣ ನೀಡಲು ನಿರಾಕರಿಸಿದ್ದಕ್ಕೆ ಮಗ ಸಿಟ್ಟಿಗೆದ್ದಿದ್ದನು. ಇದೇ ಕೋಪಕ್ಕೆ ರಾತ್ರಿ ತಂದೆ ಮಲಗಿದ್ದಾಗ ಮಾರಕಾಸ್ತ್ರಗಳಿಂದ ಕತ್ತು, ಕಾಲು ಕತ್ತರಿಸಿ ಬೇರ್ಪಡಿಸಿ ವಿಕೃತವಾಗಿ ಮಗ ಕೊಲೆ ಮಾಡಿದ್ದಾನೆ.

ಸದ್ಯ ಮೇಲ್ನೋಟಕ್ಕೆ ಆರೋಪಿಯನ್ನು ಪಬ್​ಜೀ ಆಡಲು ಹೆತ್ತ ತಂದೆಯನ್ನೇ ಕೊಂದಿದ್ದಾನೆಂದು ಅಲ್ಲಿನ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಆರೋಪಿ ರಘುವೀರ್​ ವಿರುದ್ಧ ಕಾಕತಿ ಪೋಲಿಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top