fbpx
ಸಮಾಚಾರ

ಚೊಚ್ಚಲ ಮಗುವಿಗೆ ಜನ್ಮ ನೀಡಿದ ಶ್ವೇತ ಚಂಗಪ್ಪ: ಅಮ್ಮನಾದ ಖುಷಿಯಲ್ಲಿ ‘ಮಜಾ ಟಾಕೀಸ್’ ರಾಣಿ

ನಟಿ ಮತ್ತು ನಿರೂಪಕಿ ಶ್ವೇತಾ ಚಂಗಪ್ಪ ಅವರು ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ತಮ್ಮ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ನಟಿ ಶ್ವೇತಾ ಚೆಂಗಪ್ಪ ಅವರು ಸೋಮವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತಮಗೆ ಮಗುವಾಗಿರುವ ಸಂತಸವನ್ನು ಶ್ವೇತಾ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

“ನಾವು ಈಗ ಮೂವರಾಗಿದ್ದೇವೆ. ನಮ್ಮ ತಾಯಿ, ತಂದೆ, ಕುಟುಂಬ, ಸ್ನೇಹಿತರು ಮತ್ತು ನಿಮ್ಮೆಲ್ಲರ ಶುಭಾಶಯ ಮತ್ತು ಪ್ರೀತಿಯಿಂದ ನಾನು ಹಾಗೂ ಕಿರಣ್ ನಮ್ಮ ಸಂತೋಷವನ್ನು ಸ್ವಾಗತಿಸಿದ್ದೇವೆ. ನಮಗೆ ಗಂಡು ಮಗುವಾಗಿದೆ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಆಸ್ಪತ್ರೆಯಲ್ಲಿ ಶ್ವೇತಾ ಮತ್ತು ಕಿರಣ್ ಇಬ್ಬರೂ ಮಗುವಿನ ಕೈ ಹಿಡಿದುಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

 

 

ಕಳೆದ ಕೆಲ ವರ್ಷಗಳಿಂದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ರಾಣಿ ಪಾತ್ರದಲ್ಲಿ ಬ್ಯುಸಿಯಿದ್ದ ಶ್ವೇತ ಚಂಗಪ್ಪ ಸದ್ಯ ಶೋದಿಂದ ಬ್ರೇಕ್ ಪಡೆದು ಅಮ್ಮನಾಗುತ್ತಿರುವ ಹರ್ಷದಲ್ಲಿದ್ದಾರೆ. ಇತ್ತೀಚಿಗಷ್ಟೇ ತಾವು ತಾಯಿ ಆಗುತ್ತಿರುವ ವಿಚಾರವನ್ನು ಅಭಿಮಾನಿಗಳ ಬಳಿ ಹೇಳಿಕೊಂಡಿದ್ದರು. ಈಗ ಮೊದಲ ಕಂದಮ್ಮನ ಮಡಿಲು ತುಂಬಿಸಿಕೊಂಡ ಖುಷಿಯಲ್ಲಿ ಮುಳುಗಿದ್ದಾರೆ..

ಕೊಡಗು ಮೂಲದ ನಟಿ ಶ್ವೇತಾ ಚಂಗಪ್ಪ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಿರ್ದೇಶಕ ಎಸ್. ನಾರಾಯಣ್ ಅವರ ‘ಸುಮತಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾರ್ದಾಪಣೆ ಮಾಡಿದ ಅವರು, ಯಾರಿಗುಂಟು ಯಾರಿಗಿಲ್ಲ ಎಂಬ ಕಾರ್ಯಕ್ರಮದ ನಿರೂಪನೆಯನ್ನು ಮಾಡಿದ್ದಾರೆ. ಕಾದಂಬರಿ, ಅರುಂಧತಿ ಧಾರಾವಾಹಿ, ಯಾರಿಗುಂಟು ಯಾರಿಗಿಲ್ಲ ರಿಯಾಲಿಟಿ ಶೋ, ತಂಗಿಗಾಗಿ ಸಿನಿಮಾ ಮೂಲಕ ನಾಡಿನ ಮನೆಮಾತಾಗಿರುವ ಮುದ್ದುಮುಖದ ಶ್ವೇತ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯನ್ನು ಸೇರಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top