fbpx
ಸಮಾಚಾರ

ಕನ್ನಡ ಪ್ರೇಮ ಮೆರೆದ ಐಎಎಸ್ ಅಧಿಕಾರಿ ಮಣಿವಣ್ಣನ್.

ದೇಶಾದ್ಯಂತ ಇತ್ತೀಚಿಗೆ ತಣ್ಣಗಾಗಿದ್ದ ಹಿಂದಿ ಹೇರಿಕೆಯ ಪರ-ವಿರೋಧದ ಚರ್ಚೆ ಇದೀಗ ಮತ್ತೆ ಕಾವು ಪಡೆದುಕೊಂಡಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಅದ್ದೂರಿಯಾಗಿ ಆಚರಿಸಿರುವ ಹಿಂದಿ ದಿವಸ್. ಕೇಂದ್ರ ಸರ್ಕಾರದ ಈ ನೀತಿಯ ವಿರುದ್ಧ ಇದೀಗ ಕರ್ನಾಟಕ ಮಾತ್ರವಲ್ಲ ಇಡೀ ದಕ್ಷಿಣ ಭಾರತ ಸಿಡಿದೆದ್ದು ನಿಂತಿದ್ದು ರಾಜ್ಯ ನಾಯಕರು ಟೀಕಾಪ್ರಹಾರ ನಡೆಸಿದ್ದಾರೆ. ಏಕೀ ಅನಗತ್ಯ ಹಿಂದಿ ಹೇರಿಕೆ? ಭಾರತವೆಂದರೆ ಕೇವಲ ಹಿಂದಿಭಾಷಿಕರ ದೇಶವೇ? ವಾದಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.

 

 

ಇದೀಗ ಕನ್ನಡದ ಖಡಕ್ ಐಎಎಸ್ ಅಧಿಕಾರಿ ಕ್ಯಾಪ್ಟನ್ ಮಣಿವಣ್ಣನ್ ಅವರು ಕೂಡ ಹಿಂದಿ ಹೇರಿಕೆ ವಿರುದ್ಧ ಧ್ವನಿಯೆತ್ತಿದ್ದಾರೆ. ಅಲ್ಲದೆ ತಮ್ಮ ಟ್ವಿಟರ್ ಖಾತೆಯಲ್ಲಿ ಕನ್ನಡ ಪ್ರೇಮ ಮೆರೆದಿದ್ದಾರೆ. “ನಾನು ಕರ್ನಾಟಕದಲ್ಲಿ ಕಳೆದ 20 ವರ್ಷಗಳಿಂದ ವಾಸಿಸುತ್ತಿದ್ದೇನೆ. ನಾನು ಕನ್ನಡವನ್ನು ಅರ್ಥಮಾಡಿಕೊಳ್ಳುತ್ತೇನೆ, ಮಾತನಾಡುತ್ತೇನೆ, ಓದುತ್ತೇನೆ. ಬರವಣಿಗೆಯನ್ನೂ ಕೂಡ ಅಭ್ಯಾಸ ಮಾಡುತ್ತಿದ್ದೇನೆ. ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ನನಗೆ ಹೆಮ್ಮೆ ಇದೆ. ನಮ್ಮ ಭಾರತ ಹಿಂದಿ ಇಲ್ಲದೆ ವೈವಿಧ್ಯತೆಯಲ್ಲಿ ಏಕತೆ ಕಂಡ ಭೂಮಿ. ಜೈ ಹಿಂದ್! ಜೈ ಕರ್ನಾಟಕ!” ಎಂದು ಮಣಿವಣ್ಣನ್ ಟ್ವೀಟ್ ಮಾಡಿದ್ದಾರೆ.

 

 

ಅಷ್ಟೇ ಅಲ್ಲದೆ ಕೆಲವು ದಿನಗಳ ಹಿಂದೆ ಹಿಂದಿ ಹೇರಿಕೆಯ ವಿರುದ್ಧ ಗುಡುಗಿದ್ದ ಮಣಿವಣ್ಣನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಿಂದಿ ಭಾಷೆಯಲ್ಲಿನ ಪೋಸ್ಟ್ ವೊಂದಕ್ಕೆ ಪ್ರತಿಕ್ರಿಯಿಸಿ ಹಿಂದಿ ಹೇರಿಕೆ ಸರಿಯಲ್ಲ ಎಂದು ಹೇಳಿದ್ದರು. “ನಾನೊಬ್ಬ ಹೆಮ್ಮೆಯ ಭಾರತೀಯ, ಐಎಎಸ್ ಅಧಿಕಾರಿ ಹಾಗೆಯೇ ಭಾರತೀಯ ಸೇನೆಯ ನಿಯೋಜಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಆದರೆ, ನನಗೆ ಹಿಂದಿ ಓದಲು ಬರುವುದಿಲ್ಲ. ನಾನು ಹಿಂದಿ ಕಲಿಯುವ ಅಗತ್ಯವಿಲ್ಲ ಮತ್ತು ನಾನು ಕಲಿಯಲು ಯೋಚಿಸುವುದಿಲ್ಲ.” ಎಂದು ಹೇಳುವ ಮೂಲಕ ಹಿಂದಿ ಹೇರಿಕೆ ವಿರುದ್ಧ ಧ್ವನಿಯೆತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top