fbpx
ಸಮಾಚಾರ

ದಲಿತ ಎಂಬ ಕಾರಣಕ್ಕೆ ಸಂಸದರನ್ನೇ ಊರಿಗೆ ಸೇರಿಸದ ಗ್ರಾಮಸ್ಥರು: ಚಿತ್ರದುರ್ಗದಲ್ಲಿ ಅಸ್ಪೃಶ್ಯತೆಯ ಕರಾಳಮುಖ ದರ್ಶನ.

ಚಿತ್ರದುರ್ಗದ ಬಿಜೆಪಿ ಸಂಸದ ಎ. ನಾರಾಯಣಸ್ವಾಮಿ ಅವರನ್ನು ದಲಿತನೆಂಬ ಕಾರಣಕ್ಕೆ ಗ್ರಾಮಕ್ಕೆ ಪ್ರವೇಶ ಮಾಡದಂತೆ ನಿರ್ಬಂಧಿಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಿನ್ನೆ ಸಂಜೆ ನಡೆದಿದೆ. ಪಾವಗಡದ ಗೊಲ್ಲರಹಟ್ಟಿಯಲ್ಲಿ ನಿರ್ವಸತಿಗರಿಗೆ ಮನೆ ನಿರ್ಮಾಣ ಮಾಡುವ ಸಂಬಂಧ ಭೇಟಿ ನೀಡಿದ್ದ ದಲಿತ ಸಂಸದನಿಗೆ ಗ್ರಾಮಸ್ಥರು ಊರು ಹೊರಗೇ ನಿಲ್ಲಿಸಿದ ಅಮಾನವೀಯ ಘಟನೆ ಇದಾಗಿದೆ. ಜಾತಿ ವ್ಯವಸ್ಥೆಯ ಕರಾಳ ಮುಖಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ.

ಖಾಸಗಿ ಕಂಪನಿಗಳ ತಂಡದೊಂದಿಗೆ ಊರಿಗೆ ಬಂದಿದ್ದ ಸಂಸದ ನಾರಾಯಣಸ್ವಾಮಿ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೂ ಭೇಟಿ ಕೊಟ್ಟಿದ್ದರು. ಈ ವೇಳೆ ಎದುರಾದ ಗೊಲ್ಲರಟ್ಟಿ ನಿವಾಸಿಗಳು ಹಟ್ಟಿಯ ಪ್ರವೇಶ ದ್ವಾರದಲ್ಲೇ ತಡೆದು ನಿಲ್ಲಿಸಿ, ಅಲ್ಲಿಯೇ ಕುರ್ಚಿ ಹಾಕಿ ಕೂರಲು ಮನವಿ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ಜನಾಂಗದವರು ಹಟ್ಟಿ ಒಳಗಡೆ ಹೋಗಬಾರದು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ತಂಡದಲ್ಲಿದ್ದ ಇನ್ನಿತರರನ್ನು ಹಟ್ಟಿ ಒಳಕ್ಕೆ ಬಿಟ್ಟುಕೊಂಡಿದ್ದಾರೆ.

ಬಿಜೆಪಿ ಪಕ್ಷದ ಮುಖಂಡರು ಸೇರಿದಂತೆ ಹಲವರು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು. ‘ಇನ್ನೂ ಯಾವ ಕಾಲದಲ್ಲಿದ್ದೀರಿ, ಅವರು ಹಟ್ಟಿಯ ಅಭಿವೃದ್ಧಿಗಾಗಿ ಬಂದಿದ್ದಾರೆ. ಗುಡಿಸಲು ಮುಕ್ತವಾಗಿಸಿ ಹಟ್ಟಿಗೆ ಮೂಲ ಸೌಕರ್ಯ ಕಲ್ಪಿಸಲು ಬಂದಿರುವ ಅವರಿಗೆ ಒಳಗೆ ಬರಲು ಅವಕಾಶ ಮಾಡಿಕೊಡಿ’ ಎಂದರು.

ಎ.ನಾರಾಯಣಸ್ವಾಮಿ ಅವರೂ ಸಹಕರಿಸುವಂತೆ ಕೋರಿದರು. ಆದರೆ, ಇದ್ಯಾವುದಕ್ಕೂ ಮಣಿಯದ ಗ್ರಾಮದ ಕೆಲ ಯುವಕರು, ಮುಖಂಡರು ಪಟ್ಟು ಬಿಡಲಿಲ್ಲ. ಕೊನೆಗೆ ಅಲ್ಲಿಂದ ನಾರಾಯಣಸ್ವಾಮಿ ಹಿಂದಿರುಗಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top