fbpx
ಸಮಾಚಾರ

ಮೈಸೂರು ಪಾಕ್ ಜನ್ಮ ತಾಳಿದ ಸವಿಯಾದ ಕಥೆಯನ್ನೊಮ್ಮೆ ಓದಿ.

#ಇಂದು_ಮೈಸೂರ್_ಪಾಕ್ ಬಗ್ಗೆ ವಿಶೇಷವಾದ ಚರ್ಚೆ ನಡೆಯುತ್ತಿದೆ , ಅದರೆ ಮೈಸೂರು ಪಾಕ್ ತಯಾರಿಕೆಯ ಹಿಂದಿನ ಕತೆ ಅದರ ಇತಿಹಾಸದ ಬಗ್ಗೆ ಒಂದು ಸಣ್ಣ ಮಾಹಿತಿ ಇಲ್ಲಿದೆ ನೋಡಿ

ವಿಶಿಷ್ಟ ಬಗೆಯ ಮೈಸೂರ್ ಪಾಕ್ ಜನ್ಮ ತಾಳಿದ್ದು ಮೈಸೂರಿನ ಅರಮನೆಯ ಪಾಕಶಾಲೆಯಲ್ಲಿ ಎಂದರೆ ಅಚ್ಚರಿಯಾಗಬಹುದು. ಅದು ಹೇಗೆ ಜನ್ಮ ತಾಳಿತು ಎಂಬುವುದು ಕೂಡ ಕುತೂಹಲಕಾರಿಯೇ. ಇಷ್ಟಕ್ಕೂ ಮೈಸೂರ್ ಪಾಕ್ ನಂತಹ ಸಿಹಿ ತಿನಿಸನ್ನು ತಯಾರು ಮಾಡಿದವರು ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕೆಲಸ ಮಾಡುತ್ತಿದ್ದ #ಕಾಕಾಸುರ_ಮಾದಪ್ಪನವರು.

ಇವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆ ಯಲ್ಲಿ ಸಿಹಿ ತಿಂಡಿ ತಯಾರಿಸುವ ಕೆಲಸದ ಜವಾಬ್ದಾರಿ ವಹಿಸಿಕೊಂಡಿದ್ದರು. ರಾಜ ಕುಟುಂಬಕ್ಕೆ ಬೇಕಾದ ಸಿಹಿ ಮತ್ತು ಖಾರವನ್ನು ಇವರೇ ತಯಾರಿಸುತ್ತಿದ್ದರು. ಒಮ್ಮೆ ಮಹಾರಾಜರು ತಿಂಡಿ ತಯಾರಿಸುವುದರಲ್ಲಿ ಜಾಣ್ಮೆ ಹೊಂದಿದ್ದ ಕಾಕಾಸುರ ಮಾದಪ್ಪನವರಿಗೆ ಹೊಸದಾದ ಯಾವುದಾದರೊಂದು ತಿಂಡಿ ತಯಾರಿಸುವಂತೆ ಆಜ್ಞೆ ಮಾಡಿದರು.
ಮಹಾರಾಜರು ಹೇಳಿದ ಮೇಲೆ ಮುಗಿಯಿತು. ಮರು ಮಾತನಾಡುವ ಹಾಗಿಲ್ಲ. ಹೀಗಾಗಿ ಏನು ಹೊಸ ತಿಂಡಿ ತಯಾರಿಸುವುದು ಎಂದು ಅವರು ಆಲೋಚಿಸ ತೊಡಗಿದರು. ತಮಗೆ ತೋಚಿದ ತಿಂಡಿ ತಯಾರಿಸಲು ‘ಕಾಕಾಸುರ ಮಾದಪ್ಪ’ ಮುಂದಾದರು.ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಕೊಟ್ಟರು.

ಇದರ ರುಚಿ ನೋಡಿದ ಮಹಾರಾಜರಿಗೆ ತುಂಬಾ ಖುಷಿಯಾಗಿ ಕಾಕಾಸುರ ಮಾದಪ್ಪನವರನ್ನು ಬೆನ್ನು ತಟ್ಟಿ ಪ್ರಶಂಶಿಸಿದರು. ಆದರೆ, ಈ ಹೊಸ ತಿಂಡಿಗೆ ಏನಾದರೊಂದು ಹೆಸರಿಡಬೇಕಲ್ಲವೆ? ಏನು ಹೆಸರು ಇಡುವುದೆಂದು ಮಹಾರಾಜರು ಆಲೋಚಿಸಿದರು. ಆಗ ಅವರಿಗೊಂದು ಯೋಚನೆ ಬಂದಿತು. ರುಚಿ ಶುಚಿಯಾದ ಅಡುಗೆಗೆ ‘ನಳಪಾಕ’ ಎಂದು ಕರೆಯುತ್ತೇವೆ. ಇದು ಮೈಸೂರು ಅರಮನೆಯಲ್ಲಿ ತಯಾರಾಗಿದ್ದರಿಂದ ‘ಮೈಸೂರು ಪಾಕ’ ಎಂದು ಹೆಸರಿಡೋಣ ಎಂದು ನಿರ್ಧರಿಸಿದರು. ಇದು ಮೈಸೂರು ಪಾಕ್ ನ ಉಗಮದ ಇತಿಹಾಸ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top