fbpx
ಸಮಾಚಾರ

ದೇಶದ ಪ್ರಜೆಗಳಿಗೆ ಶೀಘ್ರದಲ್ಲೆ ಹೊಸ ಗುರುತಿನ ಚೀಟಿ: ಒಂದೇ ಐಡಿ ಕಾರ್ಡ್ ನಲ್ಲಿ ಆಧಾರ್, ಡಿಎಲ್, ಪಾಸ್ ಪೋರ್ಟ್!

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಆಧಾರ್ ಗೆ ಗುಡ್ ಬೈ ಹೇಳುವ ಸುಳಿವು ನೀಡಿದ್ದು, ಆಧಾರ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಹಾಗೂ ಬ್ಯಾಂಕ್ ಖಾತೆ ಒಳಗೊಂಡ ಬಹು ಉಪಯೋಗಿ ಕಾರ್ಡ್ ಅನ್ನು ಭಾರತೀಯರಿಗೆ ನೀಡುವ ಬಗ್ಗೆ ಮಾತನಾಡಿದ್ದಾರೆ.

ದೆಹಲಿಯಲ್ಲಿ ಜನಗಣನ(ಜನಗಣತಿ) ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅಮಿತ್ ಶಾ, ದೇಶದ ಜನರ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಖಾತೆ, ಪಾಸ್ ಪೋರ್ಟ್ ಗಳ ಜಾಗದಲ್ಲಿ ಒಂದೇ ಕಾರ್ಡ್ ಇದ್ದರೆ ಬಹಳ ಸಹಾಯವಾಗುತ್ತದೆ. ಬಹು ಉಪಯೋಗಿ ಕಾರ್ಡ್(ಮಲ್ಟಿ ಪರ್ಪಸ್ ಕಾರ್ಡ್) ಇದ್ದರೆ ದೇಶದ ಹಲವು ಸಮಸ್ಯೆಗಳು ಶೀಘ್ರವೇ ಇತ್ಯರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಒಬ್ಬ ವ್ಯಕ್ತಿಯು ಸತ್ತಾಗ ಜನಸಂಖ್ಯೆಯ ದತ್ತಾಂಶದಲ್ಲಿ ಮಾಹಿತಿಯನ್ನು ಸ್ವಯಂಚಾಲಿತವಾಗಿ ನವೀಕರಿಸುವ ತಂತ್ರಜ್ಞಾನವನ್ನೂ ಇದರಲ್ಲಿ ಅಳವಡಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ.

“ಆಧಾರ್, ಪಾಸ್‌ಪೋರ್ಟ್, ಬ್ಯಾಂಕ್ ಖಾತೆ, ಚಾಲನಾ ಪರವಾನಗಿ, ಮತದಾರರ ಕಾರ್ಡ್‌ನಂತಹ ಎಲ್ಲಾ ಕಾರ್ಡುಗಳ ಬಳಕೆಗೆ ನಮ್ಮಲ್ಲಿ ಕೇವಲ ಒಂದು ಕಾರ್ಡ್ ಏಕೆ ಇರಬಾರದು? ಎಲ್ಲಾ ಡೇಟಾವನ್ನು ಒಂದೇ ಕಾರ್ಡ್‌ನಲ್ಲಿ ಸೇರಿಸುವ ವ್ಯವಸ್ಥೆ ಇರಬೇಕು. ಇದು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಡಿಜಿಟಲ್ ಜನಗಣತಿ ಬಹಳ ಮುಖ್ಯವಾಗಿದೆ” ಎಂದು ಹೇಳಿದರು.

ದೇಶದ ಜನಸಂಖ್ಯಾ ಗಣತಿ ನೀರಸ ಕೆಲಸವೇನಲ್ಲ. ಸರ್ಕಾರದ ಮಹತ್ವದ ಯೋಜನೆಗಳನ್ನು ಜನರಿಗೆ ಒದಗಿಸಲು ಇದು ಸಹಾಯ ಮಾಡುತ್ತದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್​) ಎಂಬುದು ದೇಶದ ಅಸಂಖ್ಯಾತ ಜನರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top