fbpx
ಸಮಾಚಾರ

ಪಾರದರ್ಶಕತೆ ಕಡೆಗೆ ದಿಟ್ಟ ಹೆಜ್ಜೆ: ಇಲಾಖೆಯ ಎಲ್ಲಾ ಸಭೆಗಳನ್ನು ಲೈವ್ ಮಾಡಲು ಆದೇಶ!

ಮುಂದಿನ ದಿನಗಳಲ್ಲಿ ಕಾರ್ಮಿಕ ಇಲಾಖೆಯ ಎಲ್ಲಾ ಸಭೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಲೈವ್ ಆಗಲಿವೆಯಂತೆ. ಹೌದು, ಸರ್ಕಾರದ ಎಲ್ಲಾ ಇಲಾಖೆಗಳ ಕೆಲಸದಲ್ಲಿ ಪಾರದರ್ಶಕತೆ ಇರಬೇಕು ಆಗಲೇ ಸರ್ಕಾರದ ಕೆಲಸಗಳ ಮಾಹಿತಿ ಸಾರ್ವಜನಿಕರ ಗಮನಕ್ಕೆ ಸುಲಭವಾಗಿ ಸಿಗುತ್ತದೆ. ಹಾಗೂ ಇದರಿಂದ ಸರ್ಕಾರದ ಕೆಲಸದ ದಕ್ಷತೆ ಕೂಡ ಹೆಚ್ಚುತ್ತದೆ. ಸಾರ್ವಜನಿಕರು ಕೂಡ ಸರ್ಕಾರದ ಕೆಲಸದಲ್ಲಿ ಪಾರದರ್ಶಕತೆ ಇರಬೇಕು ಎಂದು ಬಯಸುತ್ತಾರೆ.

 

 

ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯೊಂದು ಇಡಲು ಕಾರ್ಮಿಕ ಇಲಾಖೆ ಶುರು ಮಾಡಿದೆ. ಮೊನ್ನೆ ಸಂಸದ ಪಿಸಿ ಮೋಹನ್ ಮತ್ತು ಐಎಎಸ್ ಅಧಿಕಾರಿ ಮಣಿವಣ್ಣನ್ ಅವರ ನೇತೃತ್ವದಲ್ಲಿ ಕಾರ್ಮಿಕ ಇಲಾಖೆಯ ಸರ್ಕಾರೀ ಸಭೆಯೊಂದು ನಡೆಯಿತು. ಈ ಸಭೆಯನ್ನು ಟ್ವಿಟ್ಟರ್ ನಲ್ಲಿ ಲೈವ್ ಮಾಡಿದ್ದು ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಮುಂದೆ ನಡೆಯುವ ಸಭೆಗಳನ್ನು ಕೂಡ ಲೈವ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

 

 

ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಅವರು ಇಲಾಖೆಗೆ ಸಂಭಂದಿಸಿದ ಎಲ್ಲಾ ಸಭೆಗಳನ್ನು ಇನ್ನುಮುಂದೆ ಲೈವ್ ಮಾಡಲೇಬೇಕು ಎಂದು ಆದೇಶ ನೀಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿರುವ ಮಣಿವಣ್ಣನ್ “5 ಲಕ್ಷ ರೂಗಿಂತ ಹೆಚ್ಚಿನ ಯಾವುದೇ ಟೆಂಡರ್‌ಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳು ಮತ್ತು ಸಭೆಗಳು ಟೆಂಡರ್ ಅಧಿಸೂಚನೆಗೆ ಕರೆ ಮಾಡುವುದರಿಂದ ಹಿಡಿದು ಟೆಂಡರ್ ನೀಡುವವರೆಗೆ ಲೈವ್ ಆಗಲೇಬೇಕು. ಹೀಗೆ ಮಾಡುವುದರಿಂದ ಎಲ್ಲಿಯೂ 0.1% ಭ್ರಷ್ಟಾಚಾರಕ್ಕೆ ಅವಕಾಶವಿರುವುದಿಲ್ಲ! ಇದರಿಂದ ಪ್ರತಿ ಹಂತದಲ್ಲಿ ಏನಾಗುತ್ತಿದೆ ಎಂದು ಸಾರ್ವಜನಿಕರಿಗೆ ತಿಳಿಯುತ್ತದೆ!” ಎಂದು ತಿಳಿಸಿದ್ದಾರೆ.

ಸದ್ಯ ಕಾರ್ಮಿಕ ಇಲಾಖೆಯಲ್ಲಿ ಪ್ರಾರಂಭವಾಗಿರುವ ಈ ಕ್ರಮ ಮುಂದಿನ ದಿನಗಳಲ್ಲಿ ಎಲ್ಲಾ ಇಲಾಖೆಗಳಲ್ಲಿ ಶುರುವಾಗಬೇಕು ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top