fbpx
ಸಮಾಚಾರ

ಬಿಜೆಪಿಗೆ ಹೊಸ ತಲೆನೋವು: ಬಚ್ಚೇಗೌಡ ಬಂಡಾಯದ ಸೂಚನೆ, ಪುತ್ರ ಶರತ್​​ಗೆ ಬಿಜೆಪಿ ಟಿಕೆಟ್​​ ನೀಡಲೇಬೇಕೆಂದು ಆಗ್ರಹ!

ಹೊಸಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ನಿಲ್ಲಲು ತನ್ನ ಪುತ್ರ ಶರತ್‌ ಬಚ್ಚೇಗೌಡರಿಗೆ ಬಿಜೆಪಿ ಟಿಕೆಟ್​​ ನೀಡಬೇಕೆಂದು ಸಂಸದ ಬಚ್ಚೇಗೌಡ ಆಗ್ರಹಿಸಿದ್ದಾರೆ. “ಅನರ್ಹ ಶಾಸಕ ಎಂಟಿಬಿ ನಾಗರಾಜ್​​ರನ್ನು ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಏನಾದರೂ ಮಾಡಲಿ. ನಿಗಮ ಮಂಡಳಿ ಅಧ್ಯಕ್ಷರನ್ನಾಗಿಸಲೀ, ಬೇಕಾದರೇ ಕರ್ನಾಟಕ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಿ. ಆದರೆ, ಬಿಜೆಪಿ ಟಿಕೆಟ್​​ ಮಾತ್ರ ಶರತ್​​​ ಬಚ್ಚೇಗೌಡಗೆ ಕೊಡಬೇಕು ಎಂದು ಸಂಸದ ಬಚ್ಚೇಗೌಡ ಪಟ್ಟು ಹಿಡಿದಿದ್ದಾರೆ.

ಸೆ 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಇನ್ನು ಮೂರು ದಿನಗಳೊಳಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಬೇಕಾಗಿದೆ. ಆದರೆ ಯಾರನ್ನು ಅಂತಿಮಗೊಳಿಸಬೇಕೆಂಬ ಜಿಜ್ಞಾಸೆ ಕಮಲ ಪಾಳಯದಲ್ಲಿ ಎದ್ದುಕಾಣುತ್ತಿದೆ.

ತೀರ್ಮಾನದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಸದ ಬಚ್ಚೇಗೌಡ ತಿಳಿಸಿದ್ದಾರೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಶರತ್ ಅವರಿಗೆ ಅಭಿಮಾನಿಗಳು ಒತ್ತಡ ಹೇರಿದ್ದಾರೆ. ಈ ಹಿನ್ನಲೆಯಲ್ಲಿ ಹೊಸಕೋಟೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಶರತ್ ಸ್ಪರ್ಧಿಸಿದರೆ ಸ್ಥಳೀಯ ಬಿಜೆಪಿ ನಾಯಕರು ಸಂಪೂರ್ಣ ಬೆಂಬಲಿಸಿದ್ದಾರೆ ಎನ್ನಲಾಗಿದೆ.

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್​ ವಿರುದ್ಧ ಬಿಜೆಪಿಯಿಂದ ನಿಂತಿದ್ದ ಶರತ್ ಬಚ್ಚೇಗೌಡ ಕೇವಲ 5 ಸಾವಿರ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಕೊನೆಯ ಹಂತದವರೆಗೂ ಶರತ್​ ಬಚ್ಚೇಗೌಡ ಗೆಲ್ಲುತ್ತಾರೆಂದೇ ಭಾವಿಸಲಾಗಿತ್ತು. ಆದರೆ, ಕೊನೆಗೂ ಎಂಟಿಬಿ ನಾಗರಾಜ್ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದರು.

ಕಳೆದ ಬಾರಿ ಕಾಂಗ್ರೆಸ್​ಗೆ ತೀವ್ರ ಪೈಪೋಟಿ ನೀಡಿದ್ದ ಶರತ್ ಬಚ್ಚೇಗೌಡ ಈ ಬಾರಿಯ ಉಪಚುನಾವಣೆಯಲ್ಲಿ ತನಗೇ ಟಿಕೆಟ್ ನೀಡಬೇಕೆಂದು ಸಿಎಂ ಬಿಎಸ್​ ಯಡಿಯೂರಪ್ಪ ಬಳಿ ಲಾಬಿ ನಡೆಸುತ್ತಿದ್ದಾರೆ. ಇನ್ನೊಂದೆಡೆ ಎಂಟಿಬಿ ನಾಗರಾಜ್ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇಬ್ಬರೂ ತಮ್ಮ ಮೇಲೆ ಒತ್ತಡ ಹೇರುತ್ತಿರುವುದರಿಂದ ಬಿಎಸ್​ವೈಗೆ ಹೊಸಕೋಟೆ ವಿಧಾನಸಭಾ ಕ್ಷೇತ್ರ ತಲೆನೋವಾಗಿ ಪರಿಣಮಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top