fbpx
ಸಮಾಚಾರ

ಡಿಕೆ ಶಿವಕುಮಾರ್‌ಗೆ ಜಾಮೀನು ನಿರಾಕರಣೆ: ಕನಕಪುರ ಬಂಡೆಗೆ ತಿಹಾರ್ ಜೈಲೇ ಗತಿ.

ಅಕ್ರಮ ಆಸ್ತಿ ಪತ್ತೆ ಪ್ರಕರಣ ಸಂಬಂಧ ಮಾಜಿ ಸಚಿವ ಡಿಕೆ ಶಿವಕುಮಾರ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಬಿಡುಗಡೆ ಭಾಗ್ಯದ ಕನಸಿನಲ್ಲಿದ್ದ ‘ಕನಕಪುರ ಬಂಡೆ’ ಡಿಕೆ ಶಿವಕುಮಾರ್‌ಗೆ ಈಗ ಜೈಲುವಾಸವೇ ಗಟ್ಟಿಯಾಗಿದೆ.

ಡಿಕೆ ಶಿವಕುಮಾರ್‌ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ರೋಸ್ ಅವೆನ್ಯೂ ನ್ಯಾಯಾಲಯ, ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ತಿಹಾರ್‌ ಜೈಲಿನಲಿರುವ ಶಿವಕುಮಾರ್‌ ಗೆ ಜಾಮೀನು ನಿರಾಕರಿಸಲಾಗಿದೆ ಎಂದು ಒಂದೇ ವಾಕ್ಯದ ಆದೇಶ ಓದಿ ಪೀಠದಿಂದ ತೆರಳಿದರು.

ಸೆ.21ರಂದು ಬೆಳಗ್ಗೆ 11 ಗಂಟೆಯಿಂದ ಸುದೀರ್ಘವಾದ ವಾದ, ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಲಯ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಡಿಕೆ ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ ಇಡಿ ವಾದ ವಾದ ಕೇವಲ ಊಹಾತ್ಮಕ, ಸಿನಿಮಾ ಸ್ಟೋರಿಯಂತಿದೆ. ಹೀಗಾಗಿ ಜಾಮೀನು ಮಂಜೂರು ಮಾಡಿ ಎಂದು ಕೇಳಿಕೊಂಡಿದ್ದರು.

ಇಡಿ ಪರ ವಕೀಲ ನಟರಾಜ್, ಕೃಷಿ ಭೂಮಿಯಲ್ಲಿ ಭತ್ತ ಬೆಳೆಯಬಹುದೇ ಹೊರತು ಚಿನ್ನ ಬೆಳೆಯಲು ಸಾಧ್ಯ ಇಲ್ಲ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಆದಾಯ ನೋಡಿದರೆ ಕೃಷಿ ಭೂಮಿಯಲ್ಲಿ ಚಿನ್ನ ಬೆಳೆದಂತಿದೆ ಎಂದು ವಾದಿಸಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು.

ಜಾಮೀನು ಕೋರಿ ದೆಹಲಿ ಹೈಕೋರ್ಟ್ ಮೊರೆ:
ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಡಿಕೆ ಶಿವಕುಮಾರ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ಬೆನ್ನಲ್ಲೇ ಇದೀಗ ಜಾಮೀನು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಲು ಡಿಕೆ ಶಿವಕುಮಾರ್ ಪರ ವಕೀಲರು ಸಿದ್ದತೆ ನಡೆಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top