fbpx
ಸಮಾಚಾರ

ಕೆಜಿಎಫ್-2 ಚಿತ್ರಕ್ಕೆ ಬಿಗ್ ರಿಲೀಫ್!

ಕೋಲಾರ ಜಿಲ್ಲೆಯ ಬಿಜಿಎಂಎಲ್ ಪ್ರದೇಶದ ಸೈನೈಡ್ ಗುಡ್ಡದಲ್ಲಿ ‘ಕೆಜಿಎಫ್ ಚಾಪ್ಟರ್- 2’ ಸಿನಿಮಾ ಚಿತ್ರೀಕರಣ ನಡೆಸದಂತೆ ರಾಬರ್ಟ್‌ಸನ್ ಪೇಟೆ ಜೆಎಂಎಫ್‌ಸಿ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಈ ಮೂಲಕ ಕೆಜಿಎಫ್ ಚಿತ್ರತಂಡ ನಿರಾಳವಾಗಿದೆ.

ಕೆಜಿಎಫ್‌ನ ಜೆಎಂಎಫ್‌ಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ನಿರ್ಮಾಪಕರಾದ ವಿಜಯ್ ಕಿರಗಂದೂರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಚಿತ್ರೀಕರಣದ ವೇಳೆ ಸ್ಥಳದಲ್ಲಿ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿ ಮಾಡಲ್ಲ, 25 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸುತ್ತೇವೆ ಎಂದು ನ್ಯಾಯಪೀಠಕ್ಕೆ ನೀಡಿದ್ದ ವಾಗ್ದಾನ ಹೇಳಿಕೆ ದಾಖಲಿಸಿಕೊಂಡ ಬಳಿಕ ಚಿತ್ರೀಕರಣಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.

ಸೈನೈಡ್ ಗುಡ್ಡದಲ್ಲಿ ಕೆಜಿಎಫ್-2 ಚಿತ್ರದ ಚಿತ್ರೀಕರಣ ನಡೆಸದಂತೆ ಚಿತ್ರತಂಡಕ್ಕೆ ಸೂಚಿಸಿ ಅಧೀನ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಛಾಯಾಗ್ರಾಹಕ ಭುವನ್ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದರು.

ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆವರೆಗೆ ಅಧೀನ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. ಜೊತೆಗೆ, ಈ ವಿಚಾರವಾಗಿ ಜೆಎಂಎಫ್’ಸಿ ಕೋರ್ಟ್ ನಲ್ಲಿ ಮೂಲ ದಾವೆ ಹೂಡಿದ್ದ ಎನ್.ಶ್ರೀನಿವಾಸ್’ಗೆ ತುರ್ತು ನೋಟಿಸ್ ಜಾರಿಗೊಳಿಸಿ, ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top