fbpx
ಸಮಾಚಾರ

“ಬಿಜೆಪಿಗೆ ಸೇರಿಕೊಂಡಿದ್ದರೇ ಡಿಕೆ ಶಿವಕುಮಾರ್ ಇಂದು ಜೈಲಿಗೆ ಹೋಗಬೇಕಾಗಿರಲಿಲ್ಲ” ಹೊಸ ಬಾಂಬ್ ಸಿಡಿಸಿದ ಸಂಸದ

ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿ ಪಕ್ಷಕ್ಕೆ ಬರುವಂತೆ ನೀಡಿದ ಆಹ್ವಾನವನ್ನು ಅವರು ತಿರಸ್ಕರಿಸಿದ ಕಾರಣವೇ ಇಂದು ಅವರು ಜೈಲಿನಲ್ಲಿರುವುದು ಎಂದು ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. “ನಿಮಗೆ ಇದು ಕಡೆಯ ಎಚ್ಚರಿಕೆ. ಪಕ್ಷಕ್ಕೆ ಬನ್ನಿ ಎಂದು ನೀಡಿದ್ದ ಆಹ್ವಾನವನ್ನು ನಿರಾಕರಿಸಿದ್ದರ ಪರಿಣಾಮ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಡಿ.ಕೆ.ಸುರೇಶ್ ಅಸಮಾಧಾನ ಹೊರ ಹಾಕಿದ್ದಾರೆ.

ಡಿಕೆ ಶಿವಕುಮಾರ್​ ಬಂಧನದ ಬಳಿಕ ಇದೇ ಮೊದಲ ಬಾರಿಗೆ ಕನಕಪುರಕ್ಕೆ ಭೇಟಿ ನೀಡಿದ ಅವರು, ತಮ್ಮ ಮನೆಯ ಆವರಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. “ವಿಧಾನಸಭಾ ಚುನಾವಣೆಗೆ ಮುನ್ನ, ಐಟಿ ಅಧಿಕಾರಿಗಳು ಬೇರೆಯವರ ಮೂಲಕ ನಮಗೆ ಆಫರ್​ ನೀಡಿದ್ದರು. ಅಷ್ಟೇ ಅಲ್ಲದೇ ಶಾಸಕರ ರಾಜೀನಾಮೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಮಧ್ಯಪ್ರವೇಶಿಸಬಾರದು ಎಂದು ಕರೆ ಮಾಡಿ ಎಚ್ಚರಿಸಿದ್ದರು. ಅಲ್ಲದೇ ಇದು ನಿಮಗೆ ಕಡೆಯ ಎಚ್ಚರಿಕೆ” ಎಂದು ಬೆದರಿಕೆ ಹಾಕಿದರು.

ಇಡಿ, ಐಟಿ, ಸಿಬಿಐ ಸೇರಿದಂತೆ ದೇಶದ ಇಡೀ ಆಡಳಿತವೇ ಬಿಜೆಪಿಯ ಕಪಿಮುಷ್ಠಿಯಲ್ಲಿದೆ. ಯಾರು ಯಾರನ್ನ ನಂಬಬೇಕು? ಯಾವ ಸಂಸ್ಥೆಯ ಮೇಲೆ ನಂಬಿಕೆ ಇಡಬೇಕು? ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಯಾವ ತಪ್ಪನ್ನು ಮಾಡಿಲ್ಲ, ಮಾಡುವುದೂ ಇಲ್ಲ. ಆದಷ್ಟು ಬೇಗ ಅವರಿಗೆ ಜಾಮೀನು ಸಿಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಸದ್ಯ ಡಿ.ಕೆ. ಶಿವಕುಮಾರ್‌ ನ್ಯಾಯಾಂಗ ಬಂಧನದಲ್ಲಿದ್ದು ತಿಹಾರ್‌ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿಯನ್ನು ರೋಸ್‌ ಅವೆನ್ಯೂ ರಸ್ತೆಯಲ್ಲಿರುವ ಇಡಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹರ್‌ ತಿರಸ್ಕರಿಸಿದ್ದರು. ಇದಾದ ಬಳಿಕ ಜಾಮೀನು ಕೋರಿ ಶಿವಕುಮಾರ್‌ ಪರ ವಕೀಲರು ದೆಹಲಿ ಹೈಕೋರ್ಟ್‌ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ಇನ್ನಷ್ಟೆ ಆರಂಭವಾಗಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top