fbpx
ಸಮಾಚಾರ

ಒಂದೇ ದಿನಕ್ಕೆ 1.26 ಲಕ್ಷ ಮಂದಿಗೆ ಸರ್ಕಾರಿ ಕೆಲಸ: ಇತಿಹಾಸದಲ್ಲೇ ಹೊಸ ಮೈಲಿಗಲ್ಲು ನಿರ್ಮಿಸಿದ ಆಂಧ್ರ ಸರ್ಕಾರ!

ಸಿಬ್ಬಂದಿ ನೇಮಕಾತಿಯಲ್ಲಿ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಸೋಮವಾರ ಏಕಕಾಲದಲ್ಲಿ ಬರೋಬ್ಬರಿ 1.26 ಲಕ್ಷ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದರೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದೆ. ಈ ಪ್ರಮಾಣದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಂಡಿರುವ ಮೊದಲ ರಾಜ್ಯ ಎನಿಸಿಕೊಂಡಿದೆ.

ಭಾರತದಲ್ಲಿ ಹೀಗೆ ಭಾರೀ ಸಂಖ್ಯೆಯಲ್ಲಿ ಈ ಹಿಂದೆ ಒಂದೇ ದಿನಕ್ಕೆ ಯಾವ ಸರ್ಕಾರ ಕೂಡ ಉದ್ಯೋಗ ನೀಡಿರಲಿಲ್ಲ. ಆದರೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಈ ಸಾಧನೆ ಮಾಡಿದ್ದು, ಒಂದೇ ದಿನಕ್ಕೆ 1.26 ಲಕ್ಷ ಮಂದಿಗೆ ಉದ್ಯೋಗ ನೀಡಿ ಇತಿಹಾಸ ಬರೆದಿದೆ.

ಸುಮಾರು 500 ಸಾರ್ವಜನಿಕ ಸೇವೆಗಳಿಗೆ 21 ಲಕ್ಷಕ್ಕೂ ಅಧಿಕ ಮಂದಿ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರು. ಸೆಪ್ಟೆಂಬರ್ 1 ರಿಂದ 8ರವರೆಗೆ ಒಟ್ಟು 19.50 ಲಕ್ಷ ಮಂದಿ ಸರ್ಕಾರಿ ಕೆಲಸಕ್ಕಾಗಿ ಲಿಖಿತ ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆಗಳಲ್ಲಿ ಅರ್ಹತೆ ಪಡೆದ 1,98,164 ಅಭ್ಯರ್ಥಿಗಳಲ್ಲಿ ನಗರ ಪ್ರದೇಶಗಳಲ್ಲಿ 31,640 ಉದ್ಯೋಗ ನೀಡಿರುವುದನ್ನೂ ಸೇರಿಸಿ ಒಟ್ಟು 1,26,728 ಮಂದಿಗೆ ವಿವಿಧ ಹುದ್ದೆಗೆ ನೇಮಿಸಲಾಗಿದೆ.

ವಿಜಯವಾಡದಲ್ಲಿ ನೌಕಕರಿಗೆ ಉದ್ಯೋಗ ನೇಮಕಾತಿ ಪತ್ರ ವಿತರಿಸುವಾಗ ಮಾತಾಡಿದ ಸಿಎಂ ಜಗನ್​​ ಮೋಹನ್​​ ರೆಡ್ಡಿ, ವೈಎಸ್​ಆರ್​​ ಕಾಂಗ್ರೆಸ್​ ಸರ್ಕಾರ ನಿರುದ್ಯೋಗ ಹೋಗಲಾಡಿಸುವ ಪಣತೊಟ್ಟಿದೆ. ಹಾಗಾಗಿ ಇನ್ಮುಂದೆ ಯುವಕರಿಗಾಗಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿದ್ದೇವೆ. ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳು ನಡೆಯಲಿವೆ ಎಂದರು.

ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಸಿಎಂ ಜಗನ್​​ ಮೋಹನ್​​ ರೆಡ್ಡಿ ಅವರು, ಸತತ ಹೊಸ ಯೋಜನೆಗಳನ್ನು ಘೋಷಿಸುತ್ತಲೇ ಇದ್ದಾರೆ. ವೃದ್ಧಾಪ್ಯ ವೇತನ ಹೆಚ್ಚಳ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ಕಷ್ಟಪಟ್ಟು ದುಡಿಯುವ ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಗಿಫ್ಟ್​ ನೀಡಿದ್ದರು. ಅಂತೆಯೇ ನಿರುದ್ಯೋಗಿಗಳಿಗೆ 1 ಲಕ್ಷ 26 ಸಾವಿರ ಸರ್ಕಾರಿ ಉದ್ಯೋಗ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top