fbpx
ಸಮಾಚಾರ

ಪ್ರತಿಭಟನೆಗೆ ಬೆಚ್ಚಿಬಿದ್ದ ಕೇಂದ್ರ: ಕೊನೆಗೂ ನೆರೆ ಸಂತ್ರಸ್ತರಿಗೆ ಮಧ್ಯಂತರ ಪರಿಹಾರ ಘೋಷಿಸಿದ ಕೇಂದ್ರ!

ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರ ಗೋಳು ಕೊನೆಗೂ ಕೇಂದ್ರ ಸರ್ಕಾರಕ್ಕೆ ಕೇಳಿಸಿದ್ದು, 60 ದಿನಗಳ ನಂತರ 1,200 ಕೋಟಿ ರೂಪಾಯಿ ಘೋಷಣೆ ಮಾಡಿದೆ. ಎನ್ ಡಿಆರ್ ಎಫ್ ನಿಂದ ಕೇಂದ್ರ ಸರ್ಕಾರ 1,200 ಕೋಟಿ ರೂಪಾಯಿ ಮಧ್ಯಂತರ ಪರಿಹಾರ ಘೋಷಣೆ ಮಾಡಿದೆ.

ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ 13 ರಾಜ್ಯಗಳ ಪೈಕಿ ಕರ್ನಾಟಕ ಮತ್ತು ಬಿಹಾರಗಳಿಗೆ ಪರಿಹಾರ ಒದಗಿಸುವ ನಿರ್ಧಾರವನ್ನು ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರು ಶುಕ್ರವಾರ ಕೈಗೊಂಡಿದ್ದಾರೆ. ಪ್ರವಾಹಪೀಡಿತ ಬಿಹಾರಕ್ಕೆ ಎನ್‌ಡಿಆರ್‌ಎಫ್‌ ಅಡಿ ₹ 400 ಕೋಟಿ ಹಾಗೂ ರಾಜ್ಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್‌) ಅಡಿ ಪ್ರಸಕ್ತ ಸಾಲಿನ 2ನೇ ಕಂತಿನ ಭಾಗವಾಗಿ ₹ 213.75 ಕೋಟಿ ಅನುದಾನ ಒದಗಿಸಲಾಗಿದೆ.

ವಿಚಿತ್ರವೆಂದರೆ ಈ ಬಾರಿ ಕರ್ನಾಟಕದಲ್ಲಿ ಸಂಭವಿಸಿದ್ದ ಭೀಕರ ನೆರೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಜೀವ ಮತ್ತು ಸ್ವತ್ತು ಹಾನಿ ಸಂಭವಿಸಿತ್ತು. ನೆರೆ ಪರಿಸ್ಥಿತಿ ಅಧ್ಯಯನ ಮಾಡಿದ್ದ ಕೇಂದ್ರದ ತಂಡವೂ ಸಹ ಮಳೆ ಹಾನಿ ಕುರಿತಾಗಿ ಕೇಂದ್ರಕ್ಕೆ ವರದಿ ಸಲ್ಲಿಸಿತ್ತು. ಕರ್ನಾಟಕ ಸರ್ಕಾರ ನೆರೆಯಿಂದಾಗಿ 3800 ಕೋಟಿ ನಷ್ಟವಾಗಿದೆ ಎಂದು ಅಂದಾಜು ವರದಿ ಸಲ್ಲಿಸಿದೆ. ಆದರೆ, ಕೇಂದ್ರ ಸರ್ಕಾರ ಇದನ್ನು ತಿರಸ್ಕರಿಸಿದೆ. ಈಗ ಕೇವಲ 1200 ಕೋಟಿ ಬಿಡುಗಡೆ ಮಾಡಿದೆ.

ರಾಜ್ಯ ಮತ್ತು ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷವೇ ಅಧಿಕಾರದಲ್ಲಿದ್ದರೂ ಕರ್ನಾಟಕದ ನೆರೆಪೀಡಿತ ಪ್ರದೇಶಗಳ ಪುನರ್ ನಿರ್ಮಾಣಕ್ಕಾಗಿ ಕೇಂದ್ರಸರಕಾರವು ಸಾಕಷ್ಟು ಪರಿಹಾರ ಮೊತ್ತವನ್ನು ನೀಡಿಲ್ಲ ಹಾಗೂ ರಾಜ್ಯದ ಪಾಲನ್ನು ನೀಡುವಲ್ಲಿ ಬೇಕೆಂದೆ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಕಾಂಗ್ರೆಸ್, ಜೆಡಿಎಸ್ ಮಾತ್ರವಲ್ಲದೇ ಕೆಲವು ಬಿಜೆಪಿ ಶಾಸಕರೇ ಬಹಿರಂಗ ಅಸಮಧಾನ ತೋಡಿಕೊಂಡಿದ್ದರು. ಮಾತ್ರವಲ್ಲದೇ ಈ ಬಾರಿಯ ಕರ್ನಾಟಕ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂಬ ಕೂಗೂ ಸಹ ಕೇಳಿಬಂದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top