fbpx
ಸಮಾಚಾರ

ಯುವದಸರಾ ವೇದಿಕೆಯಲ್ಲಿ ಜನರ ಮುಂದೆಯೇ ಎಂಗೇಜ್ ಆದ ಚಂದನ್ – ನಿವೇದಿತಾ: ಸದ್ಯದಲ್ಲೇ ಮದುವೆ

ಯುವ ದಸರಾ ವೇದಿಕೆಯಲ್ಲೇ ಗಾಯಕ ಚಂದನ್ ಶೆಟ್ಟಿ-ನಿವೇದಿತಾಗೌಡ ಎಂಗೇಜ್ ಆಗಿದ್ದಾರೆ. ಝಗಮಗಿಸುವ ವೇದಿಕೆಯಲ್ಲಿ ನಿವೇದಿತಾಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ ಬೆರಳಿಗೆ ಉಂಗುರ ತೊಡಿಸಿ ನಿನ್ನನ್ನೇ ಮದುವೆಯಾಗುತ್ತೇನೆಂದು ಘೋಷಿಸಿದ್ದಾರೆ. ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಪ್ರೇಮ ನಿವೇದನೆ ಮಾಡಿದ್ದು ಯುವಜನತೆ ಬಿಗ್‍ಬಾಸ್ ಜೋಡಿಗೆ ಜೈಹಾರ ಹಾಕಿದರು.

ಯುವ ದಸರಾದಲ್ಲಿ ಕಾರ್ಯಕ್ರಮ‌ ನೀಡಲು ಆಗಮಿಸಿದ್ದ ಚಂದನ್ ಶೆಟ್ಟಿ ನಿವೇದಿತ ಅವರಿಗೆ ಉಂಗುರ ತೊಡಿಸಿ ಶೀಘ್ರದಲ್ಲೇ ನಾವಿಬ್ಬರು ಮದುವೆ ಆಗುವುದಾಗಿ ಘೋಷಿಸಿದರು. ನೆರೆದಿದ್ದ ಪ್ರೇಕ್ಷಕರ ನಡುವೆಯೇ ನಿವೇದಿತ ಅವರಿಗೆ ಪ್ರಪೋಸ್ ಮಾಡಿದ ಚಂದನ್ ಉಂಗುರ ತೊಡಿಸಿದರು. ಆ ಮೂಲಕ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೇಲೆ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ನಿಜವಾಗಿದೆ.

105 ದಿನಗಳಲ್ಲಿ ನಮ್ಮಿಬ್ಬರ ಸಾಕಷ್ಟು ಮಾತುಕತೆ ನಡೆದಿದೆ. 105 ದಿನಗಳಲ್ಲಿ ನಿವೇದಿತಾ ನನ್ನನ್ನು ಅರ್ಥ ಮಾಡಿಕೊಂಡಷ್ಟು ಯಾರು ಮಾಡಿಕೊಳ್ಳಲಿಲ್ಲ. ಹಾಗಾಗಿ ನನ್ನ ಜೀವನದಲ್ಲಿ ನಿವೇದಿತಾ ಮುಂದಿನ ದಿನಗಳಲ್ಲಿ ಜೊತೆಯಾಗಿರಲಿ ಎಂದು ಇಂದು ನಿಮ್ಮೆಲ್ಲರ ಸಾಕ್ಷಿಯಾಗಿ ಪ್ರೇಮ ನಿವೇದನೆಯನ್ನ ಸಲ್ಲಿಸುತ್ತಿದ್ದೇನೆ ಎಂದು ಮೊಳಕಾಲೂರಿ ಉಂಗುರ ಹಿಡಿದು ವಿಲ್ ಯು ಮ್ಯಾರಿ ಮೀ ಎಂದು ಚಂದನ್ ಪ್ರಪೋಸ್ ಮಾಡಿದರು.

‘ನನಗೆ ತುಂಬ ಶಾಕ್ ಆಗುತ್ತಿದೆ. ಐ ಲವ್ ಯೂ ಸೋ ಮಚ್. ಬಿಗ್ ಬಾಸ್ ಮನೆಯಲ್ಲಿ ನಾವು 105 ದಿನ ಜೊತೆಯಲಿ ಇದ್ವಿ. ಹೊರಗೆ ಬಂದ ಮೇಲೆ ಒಳ್ಳೆಯ ಫ್ರೆಂಡ್ಸ್ ಆದ್ವಿ. ನಂತರ ಬೆಸ್ಟ್ ಫ್ರೆಂಡ್ಸ್ ಆದ್ವಿ. ಆಮೇಲೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ್ವಿ. ಈ ತರ ಪ್ರಪೋಸ್ ಬಂದರೆ, ಓ ಮೈ ಗಾಡ್.” ಎಂದು ನಿವೇದಿತಾ ಸಂತಸ ಹಂಚಿಕೊಂಡರು.

ಪ್ರಪೋಸ್ ಗೆ ಮುನ್ನ ವೇದಿಕೆಯಲ್ಲಿ ಮಾತನಾಡಿದ್ದ ಚಂದನ್, ಇಂದು ನಿಮ್ಮ ಮುಂದೆ ಹೇಳುತ್ತಿರುವ ಮಾತುಗಳನ್ನು ನಿವೇದಿತಾಗೆ ವಿದೇಶದ ಸುಂದರ ತಾಣದಲ್ಲಿ ಹೇಳಲು ಪ್ಲಾನ್ ಮಾಡಿಕೊಂಡಿದ್ದೆ. ಆದರೆ ನಾನು ಬೆಳೆದ ಮೈಸೂರಿನಲ್ಲಿ, ಅಭಿಮಾನಿಗಳ ಸಮ್ಮುಖದಲ್ಲಿ ಹೇಳುವುದು ಉತ್ತಮ ಎಂದು ವೇದಿಕೆಯಲ್ಲೇ ನನ್ನನ್ನು ಇಷ್ಟಪಡುವ ಜನರ ಮುಂದೆ ಹೇಳೋದು ಉತ್ತಮ. ಕಾರ್ಯಕ್ರಮಕ್ಕೆ ನನ್ನ ಪೋಷಕರು, ನಿವೇದಿತಾ ತಂದೆ-ತಾಯಿ ಸಹ ಬಂದಿದ್ದಾರೆ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top