fbpx
ಸಮಾಚಾರ

“ನೋಟಿಸ್‍ಗೆ ತಲೆಕೆಡಿಸಿಕೊಳ್ಳೋದಿಲ್ಲ, ಯಾರಿಗೂ ತಲೆಬಾಗೋಲ್ಲ, ಕನ್ನಡಿಗರಿಗಾಗಿ ಧ್ವನಿ ಎತ್ತುತ್ತೇನೆ” ಶೋಕಾಸ್ ನೋಟಿಸ್​ ಬಗ್ಗೆ ಯತ್ನಾಳ್ ಪ್ರತಿಕ್ರಿಯೆ

ಪ್ರವಾಹದಿಂದ ನಲುಗಿರುವ ರಾಜ್ಯಕ್ಕೆ ಪರಿಹಾರ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಸಂಸದರು ಮತ್ತು ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಕ್ಕೆ ಪಕ್ಷದ ಶಿಸ್ತು ಸಮಿತಿಯು ನೀಡಿರುವ ನೋಟಿಸ್‌ಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೆಡ್ಡು ಹೊಡೆದಿದ್ದಾರೆ. ಪ್ರವಾಹ ಸಂತ್ರಸ್ತರ ಪರವಾಗಿ ನಾನು ಗಟ್ಟಿ ಧ್ವನಿ ತೆಗೆದಿದ್ದು, ಯಾರಿಂದಲೂ ನನ್ನ ಧ್ವನಿಯನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಡಕ್ ಆಗಿ ಹೇಳಿದ್ದಾರೆ.

ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಪ್ರವಾಹದಿಂದಾಗಿ ಜನರ ಜೀವನ ಬರ್ಬಾದ್ ಆಗಿದೆ. ಅವರಿಗೆ ಸಿಗಬೇಕಾದ ಪರಿಹಾರ ಸಿಕ್ಕಿಲ್ಲ‌. ಮಾಧ್ಯಮಗಳಲ್ಲಿ ಜನರ ಕಣ್ಣೀರು ನೋಡಿ ನಮಗೂ ಕಣ್ಣೀರು ಬಂದಿವೆ. ಇಂಥ ಪರಿಸ್ಥಿತಿಯಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಜನರ ಕಣ್ಣೀರು ಒರೆಸದಿದ್ದರೆ ನಾವು ಶಾಸಕರಾಗಿ, ಸಚಿವರಾಗಿ ಏನು ಪ್ರಯೋಜನ ಎಂದು ಎಂದು ಪ್ರಶ್ನೆ ಮಾಡಿದರು.

ಕಳೆದ 40 ವರ್ಷಗಳಿಂದ ಶಾಸಕ, ಲೋಕಸಭೆ ಸದಸ್ಯ, ಕೇಂದ್ರದ ಸಚಿವ, ವಿಧಾನ ಪರಿಷತ್ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ನನಗೂ ಏನು ಮಾತನಾಡಬೇಕು ಎಂಬುದರ ಅರಿವಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಸರಕಾರದ ವಿರುದ್ಧ ಮಾತನಾಡಿಲ್ಲ, ಸರಕಾರ ಕೆಡವಿಲ್ಲ. ಕನ್ನಡಿಗರಿಗೆ ಅನ್ಯಾಯವಾದಾಗ ಧ್ವನಿ ಎತ್ತುತ್ತೇನೆ. ಯಾರಿಗೂ ನಾನು ಹೆದರುವುದಿಲ್ಲ. ಜನಪರ ಧ್ವನಿ ಎತ್ತುತ್ತಲೇ ಇರುತ್ತೇನೆ ಎಂದು ಖಡಕ್ ಆಗಿಯೇ ಹೇಳಿದರು.

ಯಾವುದೋ ಒಂದು ನೋಟಿಸ್‌ಗೆ ನಾನು ಹೆದರುವುದಿಲ್ಲ. ನೋಟಿಸ್ ಕೊಟ್ಟು ವ್ಯಕ್ತಿಯನ್ನು ನಾಶ ಮಾಡಲು ಆಗುವುದಿಲ್ಲ. ಈಗಲೂ ನಾನು ಪರಿಹಾರ ನೀಡುವಂತೆ ಮೋದಿ ಅವರನ್ನು ಒತ್ತಾಯಿಸುತ್ತೇನೆ. ನನಗೆ ಸುಳ್ಳು ಹೇಳುವ ಅಭ್ಯಾಸ ಇಲ್ಲ’ ಎಂದು ಖಡಕ್ಕಾಗಿ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top