fbpx
ಸಮಾಚಾರ

ಪ್ರಧಾನಿ ಮೋದಿ ಸೋದರ ಸೊಸೆ ಪರ್ಸ್ ಎಗರಿಸಿದ ಖದೀಮರು!

ಉತ್ತರ ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸೋದರ ಸೊಸೆಯ ಪರ್ಸ್ ಅನ್ನು ಇಂದು ಇಬ್ಬರು ಅಪರಿಚಿತ ವ್ಯಕ್ತಿಗಳು ಕಸಿದುಕೊಂಡು ಪರಾರಿಯಾಗಿದ್ದಾರೆ.

ಪ್ರಧಾನಿ ಮೋದಿ ಅವರ ಅಣ್ಣ ಪ್ರಹ್ಲಾದ್ ಮೋದಿ ಅವರ ಮಗಳು ದಮಯಂತಿ ಬೆನ್ ಮೋದಿ ಪರ್ಸ್ ಕಳೆದುಕೊಂಡವರು. ದಮಯಂತಿ ಬೆನ್ ಅವರು ಅಮೃತಸರದಿಂದ ದೆಹಲಿಗೆ ಆಗಮಿಸಿದ್ದರು. ಹೀಗಾಗಿ ಉಳಿದುಕೊಳ್ಳಲು ಸಿವಿಲ್ ಲೇನ್ಸ್ ನಲ್ಲಿರುವ ಗುಜರಾತಿ ಸಮಾಜ ಭವನದಲ್ಲಿ ರೂಮ್ ಬುಕ್ ಮಾಡಿದ್ದರು. ಗುಜರಾತಿ ಸಮಾಜ ಭವನದ ಗೇಟ್ ಬಳಿ ಆಟೋದಿಂದ ಕೆಳಗಿಳಿಯುತ್ತಿದ್ದರು. ಈ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ಕಳ್ಳರ ಪರ್ಸ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಕಳ್ಳತನದ ಬಗ್ಗೆ ದಮಯಂತಿ ಬೆನ್ ಮೋದಿ ಅವರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ, ಇಬ್ಬರು ಖದೀಮರ ಗುರುತು ಪತ್ತೆಯಾಗಿದೆ. ದೆಹಲಿ ಪೊಲೀಸ್ ಕಮಿಷನರ್​ ಪಿಆರ್​ಒ ಮನದೀಪ್​ ಸಿಂಗ್ ರಾಂಧವಾ ಮಾತನಾಡಿ, ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಕಳ್ಳತನ ನಡೆದ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದೀಗ ಸಿಸಿಟಿವಿಯಲ್ಲಿ ದೊರೆತ ದೃಶ್ಯಾವಳಿಗಳ ಮೂಲಕ ಕಳ್ಳರನ್ನು ಪತ್ತೆ ಹಚ್ಚಿದ್ದಾರೆಂದು ವರದಿಗಳು ತಿಳಿಸಿವೆ. ಇಬ್ಬರು ಆರೋಪಿಗಳ ಪೈಕಿ ಓರ್ವ ಅಪ್ರಾಪ್ತ ಬಾಲಕನಿರುವುದು ಕಂಡು ಬಂದಿದೆ. ಶೀಘ್ರದಲ್ಲಿಯೇ ಇಬ್ಬರನ್ನೂ ಬಂಧನಕ್ಕೊಳಪಡಿಸಲಾಗುತ್ತದೆ ಎಂದು ದೆಹಲಿ ಪೊಲೀಸ್ ವಕ್ತಾರ ಸಹಾಯಕ ಪೊಲೀಸ್ ಆಯುಕ್ತ ಅನಿಲ್ ಮಿಟ್ಟಲ್ ಅವರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top