fbpx
ಸಮಾಚಾರ

ಲಿಂಗಾಯತರನ್ನು ಟಾರ್ಗೆಟ್ ಮಾಡುತ್ತಿರುವ ಕಟೀಲ್? ಬಿಜೆಪಿ ಕಚೇರಿಗೆ ಲಿಂಗಾಯತರಿಗೆ ಪ್ರವೇಶ ನಿರಾಕರಣೆ ಆರೋಪ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಲಿಂಗಾಯತರನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು ಆ ಪಕ್ಷದ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಯಡಿಯೂರಪ್ಪ ಅವರು ನೇಮಿಸಿದ್ದ ಏಳು ಮಂದಿ ಸಿಬ್ಬಂದಿಯನ್ನು ನಳಿನ್ ಕಟೀಲ್ ಏಕಾ-ಏಕಿ ವಜಾ ಮಾಡಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಈ ಬಗ್ಗೆ ಸಿಬ್ಬಂದಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದು, ‘ಲಿಂಗಾಯತ ಎಂಬ ಕಾರಣಕ್ಕೆ ಕೆಲಸದಿಂದ ತೆಗೆಯಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

ಏಳು ಜನರನ್ನು ಕೂಡ ಲಿಂಗಾಯತರು ಎಂಬ ಕಾರಣಕ್ಕೆ ಹಾಗೂ ಇವರೆಲ್ಲರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಡೆಯವರು ಎಂಬ ಕಾರಣಕ್ಕೆ ಕೆಲಸದಿಂದ ತೆಗೆದುಹಾಕಿದ್ದಾರೆ. ಇದಕ್ಕಿಂತ ಮಿಗಿಲಾಗಿ ಲಿಂಗಾಯತರು ಕಚೇರಿಗೆ ಬರದಂತೆ ನಿರ್ಬಂಧವನ್ನೂ ಹೇರಿದ್ದಾರೆ ಎಂದು ಆರೋಪಿಸಿಲಾಗಿದೆ.

ವಜಾಗೊಂಡ ಸಿಬ್ಬಂದಿಯೊಬ್ಬರು ವಿಡಿಯೊ ಮಾಡಿ ಬಿಡುಗಡೆ ಮಾಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ‘14 ವರ್ಷಗಳಿಂದ ಕೆಲಸಕ್ಕಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾದ ನನ್ನನ್ನು ಲಿಂಗಾಯತ ಎಂಬ ಕಾರಣಕ್ಕಾಗಿಯೇ ತೆಗೆದು ಹಾಕಿದ್ದಾರೆ. ಹತ್ತಾರು ವರ್ಷಗಳಿಂದ ಬಿಜೆಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಐದಾರು ಲಿಂಗಾಯತ ಸಮುದಾಯದ ಕಾರ್ಯಕರ್ತರನ್ನು ಕೆಲಸದಿಂದ ತೆಗೆಯಲಾಗಿದೆ. ಲಿಂಗಾಯತ ಕಾರ್ಯಕರ್ತರನ್ನು ಕಚೇರಿಗೆ ಬರಬೇಡಿ ಎಂದು ಹೇಳಲಾಗುತ್ತಿದೆ’ ಎಂದು ಅವರು ಹೇಳಿದ್ದು ವಿಡಿಯೊದಲ್ಲಿದೆ.

“ಈ ಹಿಂದೆ ಯಡಿಯೂರಪ್ಪ ಬೇರೆ ಪಕ್ಷ ಕಟ್ಟಿದಾಗ ಬಿಜೆಪಿ ಸ್ಥಿತಿ ಏನಾಗಿತ್ತು ಅಂತಾ ನಳೀನ್ ಕುಮಾರ್ ಕಟೀಲ್ ಅವರೇ ಯೋಚಿಸಿ. 40 ಸೀಟು ಗೆಲ್ಲಲಾಗಲ್ಲಿಲ್ಲ. ವಿರೋಧ ಪಕ್ಷದ ಸ್ಥಾನ ಪಡೆಯಲು ಯೋಗ್ಯತೆ ಇರಲಿಲ್ಲ. ಈಗ ಯಡಿಯೂರಪ್ಪ ಅವರನ್ನು ತುಳಿಯಲು ಯತ್ನಿಸಿದರೆ ಮುಂದೆ ರಾಜ್ಯದಲ್ಲಿ ಬಿಜೆಪಿಗೆ ಈ ಹಿಂದಿನ ಸ್ಥಿತಿಯೇ ಬರುತ್ತದೆ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಯತ್ನಿಸಿದರೆ ರಾಜ್ಯದಲ್ಲಿ ಬಿಜೆಪಿ ನೆಲಕಚ್ಚುವುದು ನಿಶ್ಚಿತ” ಎಂದು ಎಚ್ಚರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top