fbpx
ಸಮಾಚಾರ

ಸಿಬ್ಬಂದಿಯನ್ನು ಬೂಟಿನಿಂದ ತುಳಿದಿದ್ದ ಕೇಸ್: ‘ಸೆಕ್ಯೂರಿಟಿ ಸಂಸ್ಥೆ’ಗೆ ಬೀಗ ಜಡಿದ ಕಾರ್ಮಿಕ ಇಲಾಖೆ!

ಕೆಲಸಗಾರರ ತಲೆ ಮತ್ತು ಕುತ್ತಿಗೆ ಮೇಲೆ ಬೂಟು ಕಾಲಿಟ್ಟು ತುಳಿದು, ಒದ್ದು ಅಮಾನವೀಯವಾಗಿ ಹಲ್ಲೆಮಾಡಿದ ಬೆಂಗಳೂರು ಸೆಕ್ಯುರಿಟಿ ಫೋರ್ಸ್ ಮತ್ತು ಹೌಸ್ ಕೀಪಿಂಗ್ ಸರ್ವೀಸ್ ಕಂಪನಿಯ ಪರವಾನಗಿಯನ್ನು ಕಾರ್ಮಿಕ ಇಲಾಖೆ ರದ್ದುಗೊಳಿಸಿದೆ.

 

 

ಹಲ್ಲೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಕಾರ್ಮಿಕ ಸಚಿವ ಎಸ್‌. ಸುರೇಶ್‌ಕುಮಾರ್ ಸಂಸ್ಥೆಯ ಲೈಸನ್ಸ್ ಅನ್ನು ರದ್ದು ಪಡಿಸಿದ್ದಾರೆ. ಈ ಬಗ್ಗೆ ಕಾರ್ಮಿಕ ಇಲಾಖೆ ಸಚಿವ ಎಸ್. ಸುರೇಶ್ ಕುಮಾರ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದ ಸುದ್ದಿಯೊಂದು ನನ್ನ ಗಮನ ಸೆಳೆದಿತ್ತು. ಮಾಲೀಕರೊಬ್ಬರು ತನ್ನ ನೌಕರನನ್ನು ಬೂಟು ಕಾಲಲ್ಲಿ ಒದ್ದು ಹಾಕುವ ದೃಶ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತಷ್ಟೇ ಅಲ್ಲದೆ ಆಕ್ರೋಶ ಉಂಟು ಮಾಡಿತ್ತು. ನಾನು ಕೊಟ್ಟ ಸೂಚನೆಯ ಮೇರೆಗೆ ಬೆಂಗಳೂರು ಸೆಕ್ಯೂರಿಟಿ ಫೋರ್ಸ್ ಆ್ಯಂಡ್ ಹೌಸ್ ಕೀಪಿಂಗ್ ಸರ್ವೀಸಸ್ ಸಂಸ್ಥೆಯ ನೊಂದಣಿ ಪತ್ರವನ್ನು ರದ್ದು ಪಡಿಸಲಾಗಿರುತ್ತದೆ ಎಂದು ಟ್ವೀಟ್ ಮಾಡಿ ಆದೇಶ ಪ್ರತಿಯನ್ನೂ ಲಗತ್ತಿಸಿದ್ದಾರೆ.

ಏನಿದು ಘಟನೆ:
ಸಂಸ್ಥೆಯ ಮಾಲೀಕ ಸಲೀಂ ಖಾನ್ ತನ್ನ ಕಂಪನಿಯ ಕಾರ್ಮಿಕರಾದ ಫೈಜುವುದ್ದೀನ್ ಮತ್ತು ರೈಸೆವುದ್ದೀನ್ ಎಂಬುವವರ ಮೇಲೆ ಇತ್ತೀಚೆಗೆ ಗಂಭೀರವಾಗಿ ಹಲ್ಲೆ ನಡೆಸಿದ್ದ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಎಚ್‌ಎಸ್‌ಆರ್ ಲೇಔಟ್ ಪೊಲೀಸರು, ಸಲೀಂ ಖಾನ್‌ನನ್ನು ಬಂಧಿಸಿದ್ದರು.

:ಕೆಳಗೆ ಬಿದ್ದ ಸೆಕ್ಯುರಿಟಿ ಸೂಪರ್​ವೈಸರ್ ಮುಖದ ಮೇಲೆ ಕಾಲನ್ನೊತ್ತಿ ತುಳಿಯುತ್ತಿರುವ ಮಾಲೀಕನ ವಿಡಿಯೋ ವೈರಲ್ ಆಗಿತ್ತು. ‘ಆ ಸಿಬ್ಬಂದಿ ಹಿಂದಿ ಭಾಷೆಯಲ್ಲಿ ಬೇಡಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು. ದಯವಿಟ್ಟು ಈ ಬಾರಿ ನಮ್ಮನ್ನು ಕ್ಷಮಿಸಿ. ಇನ್ನೊಮ್ಮೆ ನನ್ನ ಜೀವನದಲ್ಲಿ ಈ ರೀತಿಯ ತಪ್ಪನ್ನು ಮಾಡುವುದಿಲ್ಲ’ ಎಂದು ಬೇಡಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top