fbpx
ಸಮಾಚಾರ

ಡಿಕೆಶಿಗೆ ಬಿಗ್ ರಿಲೀಫ್: ಹೈಕೋರ್ಟಿನಿಂದ ಡಿಕೆಶಿಗೆ ಕೊನೆಗೂ ಜಾಮೀನು ಮಂಜೂರು

ತಿಹಾರ್ ಜೈಲಿನಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರಾಗಿದೆ. ದೆಹಲಿ ಹೈಕೋರ್ಟಿನ ನ್ಯಾ.ಸುರೇಶ್ ಕುಮಾರ್ ಕೈಟ್ ಜಾಮೀನು ಆದೇಶವನ್ನು ಪ್ರಕಟಿಸಿದರು. ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ಸಂಬಂಧ ಸುಮಾರು ಗುರುವಾರ (ಅಕ್ಟೋಬರ್ 17) 3 ಗಂಟೆಗೂ ಅಧಿಕ ಕಾಲ ವಾದ-ಪ್ರತಿವಾದ ಆಲಿಸಿದ ದೆಹಲಿ ಹೈಕೋರ್ಟ್ ನ್ಯಾ. ಸುರೇಶ್ ಕುಮಾರ್ ಕೈಟ್ ಇಂದಿಗೆ ಆದೇಶವನ್ನು ಕಾಯ್ದಿರಿಸಿದ್ದರು.

ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಡಿ.ಕೆ.ಶಿವಕುಮಾರ್​​ಗೆ ಜಾಮೀನು ಮಂಜೂರು ಮಾಡಿ ದೆಹಲಿ ಹೈಕೋರ್ಟ್​ ಆದೇಶ ಹೊರಡಿಸಿದೆ. 25 ಲಕ್ಷ ರೂಪಾಯಿ ಶ್ಯೂರಿಟಿ ನೀಡುವಂತೆ ಹಾಗೂ ವಿಚಾರಣೆಗೆ ಕರೆದಾಗ ಹಾಜರಾಗುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

2017ರಲ್ಲಿ ಡಿ.ಕೆ.ಶಿವಕುಮಾರ್ ಅವರ ದೆಹಲಿ ಮನೆಯಲ್ಲಿ ಐಟಿ ದಾಳಿಯಾದಾಗ ದಾಖಲೆಗಳಿಲ್ಲದ ಹಣ ಪತ್ತೆಯಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಇ.ಡಿ.ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆಗೆಂದು ದೆಹಲಿಗೆ ಕರೆಸಿದ್ದರು. ಆದರೆ ವಿಚಾರಣೆಗೆ ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು.

ಆರೋಗ್ಯದಲ್ಲಿ ಏರುಪೇರಾದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ಡಿ.ಕೆ.ಶಿವಕುಮಾರ್ ಬಳಿಕ ತಿಹಾರ್​ ಜೈಲಿನಲ್ಲಿ ಇದ್ದರು. ಈ ಮಧ್ಯೆ ಜಾಮೀನು ಮಂಜೂರು ಮಾಡುವಂತೆ ದೆಹಲಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಡಿ.ಕೆ.ಶಿವಕುಮಾರ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಮುಕುಲ್​ ರೋಹಟಗಿ ಈ ಹಿಂದಿನ ಹಲವು ಅಕ್ರಮ ಹಣಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ಉದಾಹರಣೆ ನೀಡಿ, ಇದು ಬಂಧಿಸುವಂತಹ ಕೇಸ್​ ಅಲ್ಲ. ಇ.ಡಿ.ಅಧಿಕಾರಿಗಳು ಎಡವಿದ್ದಾರೆ ಎಂದು ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top