fbpx
ಸಮಾಚಾರ

ಯರಗಲ್ಲ ಗ್ರಾಮದ ಪ್ರಾಚೀನ ಜೈನ ಬಸದಿ!

ವಿಜಯಪುರ ಜಿಲ್ಲೆಯಲ್ಲಿ ಪ್ರಾಚೀನ ಕಾಲದಿಂದಲೂ ಜೈನ ಧರ್ಮವು ಪ್ರಚಲಿತವಾಗಿದೆ. ವಿಜಯಪುರ, ಬಾಬಾನಗರ, ಇಂಡಿ, ಮುದ್ದೇಬಿಹಾಳ ಮುಂತಾದೆಡೆ ಕಂಡುಬರುವ ಜೈನ ಬಸದಿ ಹಾಗೂ ಮೂರ್ತಿ ಶಿಲ್ಪಗಳು ಜಿಲ್ಲೆಯ ಜೈನ ಸಂಸ್ಕೃತಿಯ ಪರಂಪರೆಯನ್ನು ಅರಿಯಲು ಉಳಿದಿರುವ ಪ್ರಾಚೀನ ಕುರುಹುಗಳಾಗಿವೆ. ಹೀಗೊಂದು ಜಿಲ್ಲೆಯ ಜೈನ ಸಂಸ್ಕೃತಿಯ ಗತವೈಭವವನ್ನು ದರ್ಶಿಸುವ ಒಂದು ತಾಣವೇ, ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ #ಯರಗಲ್ಲ ಗ್ರಾಮದಲ್ಲಿರುವ ಜೈನ ಬಸದಿ!

 

 

 

ಯರಗಲ್ಲ ಗ್ರಾಮದ ಮಧ್ಯದಲ್ಲಿರುವ ಈ ಜೈನ ಬಸದಿಯು, ಈ ಊರಿನ ಅತ್ಯಂತ ಪ್ರಾಚೀನ ದೇಗುಲವಾಗಿದೆ. ಈ ಊರಿನಲ್ಲಿ ವಾಸವಿರುವ ಏಕೈಕ ಜೈನ ಕುಟುಂಬದವರಾದ ಧನಪಾಲ ಮನೆತನದವರ ಒಡೆತನದಲ್ಲಿ ಈ ಬಸದಿಯು ಸಂರಕ್ಷಿಸಲ್ಪಟ್ಟಿರುತ್ತದೆ. ಪೂರ್ವಾಭಿಮುಖವಾಗಿ ನಿರ್ಮಾಣವಾದ ಈ ಜೈನ ಬಸದಿಯು ಗರ್ಭಗೃಹ, ತೆರೆದ ಅಂತರಾಳ, ನವರಂಗ ಹಾಗೂ ಮುಖಮಂಟಪ ಹೊಂದಿದೆ. ಗರ್ಭಗೃಹದಲ್ಲಿ ಸಿಂಹಪೀಠದ ಮೇಲೆ ಭಗವಾನ್ ಮಹಾವೀರರ ಪದ್ಮಾಸೀನ ಮೂರ್ತಿಯಿದೆ. ಆಳೆತ್ತರದ ಈ ಪ್ರಾಚೀನ ಮೂರ್ತಿಯು ಬಹುಸುಂದರವಾಗಿದ್ದು, ಭಕ್ತಿಯ ಭಾವವನ್ನು ಉಕ್ಕೇರಿಸುತ್ತದೆ. ಗರ್ಭಗೃಹದ ಬಾಗಿಲುವಾಡಾವು ವಿವಿಧ ಅಲಂಕರಣ ಪಟ್ಟಿಕೆಗಳಿಂದ ಕೂಡಿದ್ದು ಗಮನಾರ್ಹವಾಗಿದೆ.ಈ ಬಾಗಿಲಿನ ಲಲಾಟದಲ್ಲಿ ಕುಳಿತ ಜಿನರ ಬಿಂಬ ಹಾಗೂ ತಳಭಾಗದಲ್ಲಿ ದ್ವಾರಪಾಲಕರ ಆಕರ್ಷಕ ಶಿಲ್ಪಗಳಿವೆ.

ಗರ್ಭಗೃಹದ ಮುಂದೆ ತೆರೆದ ಅಂತರಾಳ ಹಾಗೂ ವಿಶಾಲವಾದ ನವರಂಗ ಇದೆ. ನವರಂಗದಲ್ಲಿ ಬೃಹತ್ ಗಾತ್ರದ ನಾಲ್ಕು ಆಕರ್ಷಕ ಸ್ತಂಭಗಳಿವೆ. ನವರಂಗದ ಮಧ್ಯದ ಪೀಠದ ಮೇಲೆ ಕ್ಷೇತ್ರಪಾಲ, ಚೌವೀಸ್ ತೀರ್ಥಂಕರರು, ಪಾರ್ಶ್ವನಾಥ, ಹಾಗೂ ಇತರೆ ತೀರ್ಥಂಕರರ ಬಿಡಿಶಿಲ್ಪಗಳಿದ್ದು ಕುತೂಹಲ ಮೂಡಿಸುತ್ತವೆ. ಇಲ್ಲಿ ಕಂಚಿನ ಮೂರ್ತಿಗಳು ಸಹ ಇದ್ದು ಸುಂದರವಾಗಿವೆ. ನವರಂಗದ ಪ್ರವೇಶ ಬಾಗಿಲು ಸಹ ಆಕರ್ಷಕ ಪಟ್ಟಿಕೆಗಳಿಂದ ಕೂಡಿದ್ದು, ಲಲಾಟದಲ್ಲಿ ಕುಳಿತ ಜಿನರ ಬಿಂಬವನ್ನು ಹೊಂದಿದೆ. ಮುಂಭಾಗದಲ್ಲಿರುವ ಮುಖಮಂಟಪವು ಹಾಗೂ ಹೊರಗೋಡೆಯು ನಂತರದ ಕಾಲದಲ್ಲಿ ಜೀರ್ಣೋದ್ಧಾರಗೊಂಡ ಭಾಗವಾಗಿದೆ.ಈ ಜೈನ ಬಸದಿಯ ಎಡಭಾಗದಲ್ಲಿ ಒಂದು ಪುರಾತನ ಮರವಿದ್ದು, ಜೈನ ಯಕ್ಷಿಯಾದ ಪದ್ಮಾವತಿ ದೇವಿಯು ಈ ಮರದಲ್ಲಿ ನೆಲೆಸಿರುವಳು ಎಂಬ ಪ್ರತೀತಿ ಇದೆ.

ಇಂತಿರುವ ಚಾರಿತ್ರಿಕ ಗ್ರಾಮವು ತಾಲ್ಲೂಕು ಕೇಂದ್ರ ಸಿಂದಗಿಯಿಂದ ಸುಮಾರು ೧೨ಕಿ.ಮಿ. ದೂರವಿದ್ದು, ಕಲಬುರಗಿ ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೇಲೆಯೇ ಇರುವುದರಿಂದ ಸುಲಭವಾಗಿ ತಲುಪಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top