fbpx
ಸಮಾಚಾರ

ಅಯೋಧ್ಯೆ ತೀರ್ಪಿಗೆ 27 ವರ್ಷ ಉಪವಾಸ ಮಾಡಿ ಕಾದ ಆಧುನಿಕ ಶಬರಿ

ರಾಮನ ಆಗಮನಕ್ಕಾಗಿ ಕಾದಿದ್ದ ಶಬರಿಯ ಕಥೆ ಎಲ್ಲರಿಗೂ ಗೊತ್ತಿರುವಂಥದ್ದೆ. ಆದರೆ, ಇಲ್ಲೊಬ್ಬರು ಆಧುನಿಕ ಶಬರಿ, ರಾಮನ ಬದಲಿಗೆ ಅಯೋಧ್ಯೆ ಜಮೀನು ವಿವಾದ ಪರಿಹಾರಕ್ಕಾಗಿ ಬರೋಬ್ಬರಿ 27 ವರ್ಷ ಊಟ ಬಿಟ್ಟು ಉಪವಾಸ ಮಾಡಿದ್ದಾರೆ.

ಮಧ್ಯಪ್ರದೇಶದ ಜಬಲ್‍ಪುರದ ಊರ್ಮಿಳಾ ಚರ್ತುವೇದಿ(81) ರಾಮ ಜನ್ಮಭೂಮಿ ವಿವಾದ ಬಗೆಹರಿಯಲೆಂದು ಉಪವಾಸ ಮಾಡಿದ್ದಾರೆ. ಊರ್ಮಿಳಾ ಅವರು ಸಂಸ್ಕೃತ ಭಾಷಾ ಶಿಕ್ಷಕಿಯಾಗಿದ್ದು, ಅಯೋಧ್ಯೆ ಜಮೀನು ವಿವಾದ ಪರಿಹಾರಕ್ಕಾಗಿ 1992ರಿಂದ ಅನ್ನ ಆಹಾರ ತ್ಯಜಿಸಿ ಉಪವಾಸ ಮಾಡಿಕೊಂಡು ಬಂದಿದ್ದಾರೆ. ಜಮೀನು ವಿವಾದ ಇತ್ಯರ್ಥವಾಗುವ ತನಕ ಅಂದರೆ 27 ವರ್ಷ ಕಾಲ ಬರೀ ಹಣ್ಣು ಮತ್ತು ಹಾಲು ಕುಡಿದು ಊರ್ಮಿಳಾ ಬದುಕಿದ್ದಾರೆ. ಶಬರಿ ರಾಮನಿಗಾಗಿ ಕಾದಂತೆ ಶಿಕ್ಷಕಿ ಅಯೋಧ್ಯೆ ತೀರ್ಪಿಗಾಗಿ ಕಾದು ಭಕ್ತಿ ಮೆರೆದಿದ್ದಾರೆ.

1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸಗೊಂಡು ದೇಶದಾದ್ಯಂತ ಹಿಂಸಾಚಾರ ನಡೆದಾಗ ಅವರು ಬಹಳ ಖಿನ್ನತೆಗೊಳಗಾಗಿದ್ದರು. ತಮ್ಮ 54ನೇ ವಯಸ್ಸಿನಲ್ಲಿ ಅವರು ಉಪವಾಸ ಮಾಡಲು ಆರಂಭಿಸಿದರು. ಅನ್ನ ಸೇವಿಸುವುದನ್ನು ಬಿಟ್ಟು ಕೇವಲ ಹಣ್ಣು ಮತ್ತು ಹಾಲನ್ನು ಮಾತ್ರ ಸೇವನೆ ಮಾಡಿಕೊಂಡು ಬಂದಿದ್ದಾರೆ.

‘ಶನಿವಾರ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಅಯೋಧ್ಯೆ ತೀರ್ಪು ನೀಡಿದ್ದನ್ನು ಕೇಳಿ ಸಂತೋಷಗೊಂಡಿರುವ ಅಮ್ಮ. ಇದೀಗ ಊಟ ಮಾಡಲು ತೀರ್ಮಾನಿಸಿದ್ದಾರೆ’ ಎಂದು ಅವರ ಮಗ ಅಮಿತ್ ಚರ್ತುವೇದಿ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top