fbpx
ಸಮಾಚಾರ

ಕೇವಲ 54 ಎಸೆತಗಳಲ್ಲಿ 129 ರನ್ ಚಚ್ಚಿದ ಕನ್ನಡಿಗ ಮನೀಶ್ ಪಾಂಡೆ: ಅಗ್ರ ಸ್ಥಾನಕ್ಕೇರಿದ ಕರ್ನಾಟಕ!

ಭಾನುವಾರವಷ್ಟೇ ಬಾಂಗ್ಲಾದೇಶ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಆಡಿದ್ದ ಮನೀಶ್ ಪಾಂಡೆ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಕೂಡಿಕೊಂಡಿದ್ದು ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದಾರೆ. ನಾಯಕ ಮನೀಶ್ ಪಾಂಡೆ ಸ್ಫೋಟಕ ಆಟದ ನೆರವಿನಿಂದ ರಾಜ್ಯ ತಂಡ 80 ರನ್​ಗಳಿಂದ ಜಯಿಸಿದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ವೈಝಾಗ್‌ನ ಪಿವಿಜಿ ರಾಜು ಎಸಿಎ ಕ್ರೀಡಾ ಸಂಕೀರ್ಣದಲ್ಲಿ ಮಂಗಳವಾರ ನಡೆದ ‘ಎ’ ಗುಂಪಿನ ಹಣಾಹಣಿಯಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ ತಂಡ, ಮನೀಶ್ ಮತ್ತು ದೇವದತ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್‌ಗಳ ಶಿಖರ ನಿರ್ಮಿಸಿತು. ಕರ್ನಾಟಕ ತಂಡ ಕಲೆಹಾಕಿದ ಈ ರನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಇತಿಹಾಸದಲ್ಲೇ ದಾಖಲಾದ ಗರಿಷ್ಠ ಮೊತ್ತವಾಗಿದೆ.

ನಾಯಕ ಮನೀಶ್ ಪಾಂಡೆ ಕೇವಲ 54 ಎಸೆತಗಳಲ್ಲಿ 12 ಬೌಂಡರಿ ಹಾಗೂ 10 ಅಮೋಘ ಸಿಕ್ಸ್ ಸಿಡಿಸಿ ಅಜೇಯ 129 ರನ್ ಚಚ್ಚಿದರು. ಪಾಂಡೆಗೆ ಕಳೆದ ಪಂದ್ಯದಲ್ಲಿ ಮಿಂಚಿದ್ದ ದೇವದತ್ ಪಡಿಕ್ಕಲ್ ಭರ್ಜರಿ ಸಾತ್ ನೀಡಿದರು. ಮನಬಂದಂತೆ ಆಟವಾಡಿದ ಪಾಂಡೆ ಶತಕ ಸಿಡಿಸಿ ಆರ್ಭಟಿಸಿದರು. 2ನೇ ವಿಕೆಟ್​ಗೆ ದೇವದತ್ ಹಾಗೂ ಪಾಂಡೆ 167 ರನ್​ಗಳ ಅಮೋಘ ಜೊತೆಯಾಟ ಆಡಿದರು..

ಗುರಿ ಬೆಂಬತ್ತಿದ ಸರ್ವೀಸಸ್ ತಂಡವನ್ನು ಶ್ರೇಯಸ್ ಗೋಪಾಲ್ ಕಾಡಿದರು. ಕೇವಲ 19 ರನ್‌ಗೆ ಗೋಪಾಲ್‌ 5 ವಿಕೆಟ್ ಮುರಿದಿದ್ದರಿಂದ ಸರ್ವೀಸಸ್ 20 ಓವರ್‌ಗೆ 7 ವಿಕೆಟ್ ಕಳೆದು 170 ರನ್ ಪೇರಿಸಲಷ್ಟೇ ಶಕ್ತವಾಯ್ತು. ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಸೋತು ಮೂರರಲ್ಲಿ ಗೆದ್ದು ಬೀಗಿರುವ ರಾಜ್ಯ ತಂಡ ಒಟ್ಟು 12 ಅಂಕದೊಂದಿಗೆ ಗ್ರೂಪ್ ಎ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದೆ. ನವೆಂಬರ್ 15 ರಂದು ಬಿಹಾರ್ ವಿರುದ್ಧ ಕೋಲ್ಕತ್ತಾದಲ್ಲಿ ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವನ್ನಾಡಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top