fbpx
ಸಮಾಚಾರ

ಮೊಬೈಲ್ ಬಳಕೆದಾರರಿಗೆ ಕಹಿಸುದ್ದಿ: ಡಿಸೆಂಬರ್ 01ರಿಂದ ಕರೆ, ಡೇಟಾ ಶುಲ್ಕ ಏರಿಕೆ.

ಇಲ್ಲಿಯವರೆಗೆ ಅಗ್ಗವಾಗಿ ಡೇಟಾ ಬಳಸುತ್ತಿದ್ದವರಿಗೆ ಶಾಕಿಂಗ್ ನ್ಯೂಸ್. ಡಿಸೆಂಬರ್ ಆರಂಭದಿಂದ ಟೆಲಿಕಾಂ ಕಂಪನಿಗಳು ಡೇಟಾ ಮತ್ತು ಕರೆ ದರಗಳನ್ನು ಏರಿಸಲು ಮುಂದಾಗಿವೆ. ಮಾರುಕಟ್ಟೆಯಲ್ಲಿ ಸ್ಪರ್ಧೆಗಾಗಿ ಮೂರು ವರ್ಷಗಳಿಂದ ದರವನ್ನು ಇಳಿಸಿದ್ದ ಟೆಲಿಕಾಂ ಕಂಪನಿಗಳು ಈಗ ದರ ಏರಿಸಲು ಸಿದ್ಧತೆ ನಡೆಸಿವೆ.

ವೊಡಾಫೋನ್ ಐಡಿಯಾ, ಏರ್ಟೆಲ್ ಸೋಮವಾರ ಪ್ರತ್ಯೇಕ ಹೇಳಿಕೆಯನ್ನು ಬಿಡುಗಡೆ ಮಾಡಿ ಕಂಪನಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಬೆಲೆ ಏರಿಕೆ ಮಾಡಲಾಗುವುದು ಎಂದು ಹೇಳಿಕೊಂಡಿವೆ.

‘ಟೆಲಿಕಾಂ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ಆರ್ಥಿಕ ಒತ್ತಡ ಎಲ್ಲಾ ಮೊಬೈಲ್ ಕಂಪೆನಿಗಳ ಪರಿಸ್ಥಿತಿಯನ್ನು ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ. ಸಂಪುಟ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಕಾರ್ಯದರ್ಶಿಗಳ ಮಂಡಳಿಯೊಂದು ಈ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿದೆ. ತನ್ನ ಗ್ರಾಹಕರಿಗೆ ವಿಶ್ವದರ್ಜೆಯ ಡಿಜಿಟಲ್ ಸೇವೆಯನ್ನು ಒದಗಿಸುವ ಉದ್ದೇಶದಿಂದ ವೊಡಾಫೋನ್ ಐಡಿಯಾ ಕಂಪೆನಿಯು ತನ್ನ ಟಾರಿಫ್ ದರಗಳನ್ನು ಇದೇ ಡಿಸೆಂಬರ್ 01ರಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಲಿದೆ’ ಎಂದು ಕಂಪೆನಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ದ್ವಿತೀಯ ತ್ರೈಮಾಸಿಕದಲ್ಲಿ ಒಟ್ಟು 74,000 ಕೋಟಿ ರೂ ನಷ್ಟ ಅನುಭವಿಸಿರುವುದಾಗಿ ಹೇಳಲಾಗಿದೆ. ಒಂದೊಮ್ಮೆ ಟೆಲಿಕಾಂ ವಲಯಕ್ಕೆ ಪರಿಹಾರ ಹರಿದುಬರದೆ ಹೋದಲ್ಲಿ ಮುಂದೆ ಇನ್ನಷ್ಟು ಕಠಿಣ ಪರಿಸ್ಥಿತಿ ಎದುರಾಗಲಿದೆ ಎಂದು ವೊಡಾಫೋನ್ ಸುಳಿವು ನೀಡಿದೆ.

ವಿಐಎಲ್ ತನ್ನ ವ್ಯಾಪ್ತಿ ಮತ್ತು ಸಾಮರ್ಥ್ಯ ಎರಡನ್ನೂ ಶೀಘ್ರವಾಗಿ ವಿಸ್ತರಿಸುತ್ತಿದೆ ಮತ್ತು ಮಾರ್ಚ್ 2020 ರ ವೇಳೆಗೆ 1 ಬಿಲಿಯನ್ ಭಾರತೀಯ ನಾಗರಿಕರಿಗೆ 4ಜಿ ಸೇವೆಗಳನ್ನು ಒದಗಿಸುವ ಹಾದಿಯಲ್ಲಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top