fbpx
ಸಮಾಚಾರ

ಕುರುಬ ಸಮುದಾಯದ ವಿರುದ್ಧ ಹೇಳಿಕೆ: ಮಾಧುಸ್ವಾಮಿ ಪರವಾಗಿ ಕ್ಷಮೆಯಾಚಿಸಿದ ಯಡಿಯೂರಪ್ಪ!

ಸಚಿವ ಮಾಧುಸ್ವಾಮಿ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುರುಬ ಸಮುದಾಯದ ಕ್ಷಮೆ ಯಾಚಿಸಿದ್ದಾರೆ. ಹುಳಿಯಾರ್ ಸರ್ಕಲ್‌ಗೆ ಕನಕದಾಸರ ಹೆಸರಿಡಲು ನಮ್ಮದೇನು ತಕರಾರಿಲ್ಲ, ಮಾಧುಸ್ವಾಮಿಗೂ ಯಾವುದೇ ತಕರಾರು ಇಲ್ಲ. ಮಾಧುಸ್ವಾಮಿ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಇದರಲ್ಲಿ ಗೊಂದಲ, ಅಪಾರ್ಥಕ್ಕೆ ಎಡೆ ಮಾಡಿಕೊಡುವುದು ಬೇಡ. ಕನಕವೃತ್ತ ಎಂದು ಹೆಸರಿಡಲು ಮಾಧುಸ್ವಾಮಿ ಒಪ್ಪಿಗೆ ನೀಡಿದ್ದಾರೆ. ಇದನ್ನು ಇಲ್ಲಿಗೆ ಕೊನೆ ಮಾಡಬೇಕು ಎಂದು ಎಲ್ಲರಲ್ಲೂ ಕೈ ಮುಗಿದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಏನಿದು ಘಟನೆ?
ತುಮಕೂರಿನ ಚಿಕ್ಕನಾಯಕನಹಳ್ಳಿಯ ಹುಳಿಯಾರ್ ವೃತ್ತದಿಂದ ಕನಕದಾಸರ ಹೆಸರು ಕೈಬಿಟ್ಟಿರುವುದು ಈ ವಿವಾದಕ್ಕೆ ಮೂಲ ಕಾರಣ. 20 ವರ್ಷಗಳ ಹಿಂದೆ ಕನಕ ಯುವ ಸೇನೆಯ ಯುವಕರು ಹುಳಿಯಾರ್​ ಸರ್ಕಲ್‍ಗೆ ಕನಕದಾಸ ಸರ್ಕಲ್ ಎಂಬ ನಾಮಫಲಕ ಹಾಕಿದ್ದರು. ಕನಕದಾಸ ಸರ್ಕಲ್​ ಎಂದು ಮರುನಾಮಕರಣ ಮಾಡಲು ಗ್ರಾಮಪಂಚಾಯಿತಿ ಸಭೆಯಲ್ಲಿ ಒಪ್ಪಿಗೆ ಕೂಡ ಸಿಕ್ಕಿತ್ತು.

ಇತ್ತೀಚೆಗೆ ಹೈವೇ ಕಾಮಗಾರಿ ಹಿನ್ನೆಲೆಯಲ್ಲಿ ಈ ಬೋರ್ಡ್​ಅನ್ನು ತೆಗೆಯಲಾಗಿತ್ತು. ಈ ಕಾಮಾಗಾರಿ ಪೂರ್ಣಗೊಂಡಿದ್ದು, ಸರ್ಕಲ್​ಗೆ ಮತ್ತೆ ಕನಕದಾಸರ ಹೆಸರನ್ನು ಹಾಕಲು ಮುಂದಾದಾಗ ಲಿಂಗಾಯತ ಸಮುದಾದಯದವರು ಡಾ. ಶಿವಕುಮಾರಸ್ವಾಮಿ ಹೆಸರಿಡಬೇಕು ಎಂದು ಒತ್ತಾಯಿಸಿದ್ದರು. ಈ ವಿಚಾರದಲ್ಲಿ ಭಾರೀ ಗಲಭೆ ಕೂಡ ಉಂಟಾಗಿತ್ತು. ಈ ವೇಳೆ ಕುರುಬ ಸಮುದಾಯದ ಪ್ರಭಾವಿ ಸ್ವಾಮೀಜಿ, ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿಯನ್ನು‌ ಮಾಧುಸ್ವಾಮಿ ನಿಂದಿಸಿದ್ದರು. ಅಲ್ಲದೆ, ಕ್ಷಮೆಯಾಚಿಸುವ ಮಾತೇ ಇಲ್ಲ ಎಂದಿದ್ದರು.

15 ವರ್ಷಗಳಿಂದ ಆ ವೃತ್ತವನ್ನು ಕನಕವೃತ್ತ ಎಂದು ಕರೆಯಲಾಗುತ್ತದೆ. ಈಗ ಆ ಸ್ಥಳಕ್ಕೆ ಶಿವಕುಮಾರ ಸ್ವಾಮೀಜಿ ನಾಮಫಲಕ ಹಾಕಲು ಲಿಂಗಾಯತ ಸಮುದಾಯದವರು ಮುಂದಾಗಿದ್ದಾರೆ. ಇದಕ್ಕೆ ಕನಕ ವೃತ್ತ ಎಂದು ನಾಮಕರಣ ಮಾಡಲು ಕುರುಬ ಸಮುದಾಯದವರು ಒತ್ತಾಯಿಸುತ್ತಿದ್ದಾರೆ ಎಂದು ಸಭೆಯಲ್ಲಿ ಸ್ವಾಮೀಜಿ ತಿಳಿಸಿದ್ದರು. ವೃತ್ತಕ್ಕೆ ಕನಕದಾಸರ ಹೆಸರಿಡಲೇಬೇಕು, ಇಲ್ಲವಾದಲ್ಲಿ ಹೋರಾಟ ಮಾಡುತ್ತೇವೆ ಎಂದು ಸ್ವಾಮೀಜಿ ಎಚ್ಚರಿಸಿದ್ದರು.

ಇದಕ್ಕೆ ಪ್ರತಿಯಾಗಿ ಮಾಧುಸ್ವಾಮಿಯವರು, ನೀವು ಧಮ್ಕಿ ಹಾಕುತ್ತೀರ, ನಾನೂ ಹೋರಾಟಗಾರನೇ ಕಾನೂನು ಬಿಟ್ಟು ಹೋಗುವುದಿಲ್ಲ. ಕಾನೂನಿಗೆ ಆದ್ಯತೆ ನೀಡುವುದೇ ನನ್ನ ಹೋರಾಟ ಎಂದು ಸಿಡಿಮಿಡಿಗೊಂಡಿದ್ದರು. ಹೀಗಾಗಿ ಸಭೆಯಲ್ಲಿ ಗದ್ದಲ ಉಂಟಾಗಿ ಸಭೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.

ಈ ಬೆಳವಣಿಗೆ ನಂತರ ಮಾಧುಸ್ವಾಮಿ ನಮ್ಮ ಸಮುದಾಯದವರನ್ನು ಅವಮಾನಿಸಿದ್ದಾರೆ ಎಂದು ಕುರುಬ ಸಮುದಾಯದವರು ಸಿಡಿದೆದ್ದಿದ್ದರು. ಆದರೆ ಈ ವಿಚಾರದಲ್ಲಿ ಕ್ಷಮೆಯಾಚಿಸುವ ಮಾತೇ ಇಲ್ಲ ಎಂದು ಮಾಧುಸ್ವಾಮಿ ಹೇಳಿದ್ದರು. ಈ ವಿಚಾರ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದನ್ನು ಅರಿತ ಬಿಎಸ್​ವೈ ಕ್ಷಮೆ ಕೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top