fbpx
ಸಮಾಚಾರ

ಇಂದಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ

ರಾಜ್ಯದ ಹೆಸರಾಂತ ಪುಣ್ಯಕ್ಷೇತ್ರವಾದ ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರದಲ್ಲಿ ಇಂದಿನಿಂದ (ನವೆಂಬರ್ 22ರಿಂದ)ಲಕ್ಷದೀಪೋತ್ಸವ ಸಂಭ್ರಮ ನಡೆಯಲಿದೆ. ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ, ಕ್ಷೇತ್ರಕ್ಕೆ ಬರುವ ಭಕ್ತರಿಗೆ ವಿವಿಧ ವಿಚಾರಗಳ ಕುರಿತು ಮಾಹಿತಿ ಉಣ ಬಡಿಸುವ ಕಾರ್ಯಕ್ರಮವಾಗಿಯೂ ಈ ಲಕ್ಷ ದೀಪೋತ್ಸವ ಮೂಡಿ ಬಂದಿದೆ.

5 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಈ ದೀಪೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಮೇಳ, ಸಾಹಿತ್ಯ ಸಮ್ಮೇಳನ, ಸರ್ವ ಧರ್ಮ ಸಮ್ಮೇಳನ ಹೀಗೆ ಹಲವು ರೀತಿಯ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಲಕ್ಷ ದೀಪೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ದೇವಸ್ಥಾನ, ಹೆಗ್ಗಡೆಯವರ ನಿವಾಸ, ಅನ್ನಪೂರ್ಣ ಛತ್ರ, ಬಸದಿ, ರಾಜಬೀದಿ, ರಥ ಬೀದಿ ಹಾಗೂ ಕ್ಷೇತ್ರದ ಎಲ್ಲ ಕಡೆ ತಳಿರು, ತೋರಣ, ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿವೆ.

ಶ್ರೀಕ್ಷೇತ್ರದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಇತರೆ ಉತ್ಸವಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಶ್ರೀ ಮಂಜುನಾಥಸ್ವಾಮಿಯ ಐದು ದಿನಗಳ ಉತ್ಸವಗಳು, ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ನಡುವೆಯೇ, ಖ್ಯಾತ ವಿದ್ವಾಂಸರು, ಗಣ್ಯರು ಹಾಗೂ ಕಲಾವಿದರ ಸಹಭಾಗಿತ್ವದಲ್ಲಿ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ 87ನೇ ಅಧಿವೇಶನವೂ ಸಂಪನ್ನಗೊಳ್ಳಲಿವೆ.

ದೀಪೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ರಾಜ್ಯಮಟ್ಟದ 42ನೇ ವಸ್ತುಪ್ರದರ್ಶನದಲ್ಲಿ ಜ್ಞಾನ-ವಿಜ್ಞಾನ ಸಮ್ಮಿಳಿತದ 197 ವಿವಿಧ ಪ್ರಕಾರದ ಮಳಿಗೆಗಳು ಆಕರ್ಷಿಸಲಿವೆ. ಸರಕಾರಿ ಮಳಿಗೆಗಳು, ಎಲೆಕ್ಟ್ರಾನಿಕ್‌ ವಸ್ತುಗಳು, ಪುಸ್ತಕ ಮಳಿಗೆ, ಸಿರಿ ಉತ್ಪನ್ನಗಳು, ತರಕಾರಿ ಬೀಜಗಳು, ರುಡ್ಸೆಟ್‌ ಮಳಿಗೆ, ಎಸ್‌ಕೆಡಿಆರ್‌ ಡಿಪಿ ಮಳಿಗೆ, ಕೃಷಿ ಉಪಕರಣಗಳು, ನಾಟಿ ಔಷಧ, ಕರಕುಶಲ ವಸ್ತು, ಗೋಬರ್‌ ಗ್ಯಾಸ್‌, ವಸ್ತ್ರ ಮಳಿಗೆಗಳು, ವಾಹನ ಮಳಿಗೆ, ನೀರು ಶುದ್ಧೀಕರಣ ಸಹಿತ ವಿವಿಧ ಬಗೆಯ ಮಳಿಗೆಗಳು ಸಿದ್ಧಗೊಂಡಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top