fbpx
ಸಮಾಚಾರ

ಹಿಂದಿ ಹೇರಿಕೆ ವಿರುದ್ಧ ಹೋರಾಟಕ್ಕೆ ಜಯ: ಒಂದು ದೇಶ ಒಂದು ಭಾಷೆ ಜಾರಿ ಇಲ್ಲ

ಹಿಂದಿ ಹೇರಿಕೆಗೆ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ, ‘ಒಂದು ದೇಶ, ಒಂದು ಭಾಷೆ’ ಜಾರಿ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟನೆ ನೀಡಿದೆ. ಹಿಂದಿಯನ್ನು ರಾಷ್ಟ್ರದ ಮುಖ್ಯ ಭಾಷೆಯನ್ನಾಗಿ ಮಾಡುವ ಯಾವ ಪ್ರಸ್ತಾಪವೂ ಕೇಂದ್ರ ಸರ್ಕಾರದ ಮುಂದೆ ಇಲ್ಲ. ಅದೇ ರೀತಿ ಎಲ್ಲಾ ಉಪಯೋಗಗಳಿಗಾಗಿ ಒಂದೇ ಕಾರ್ಡ್ ಅನ್ನು ಜಾರಿಗೊಳಿಸುವ ಯೋಜನೆಗಳಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸಂಸತ್ತಿನಲ್ಲಿ ತಿಳಿಸಿದೆ.

ರಾಜ್ಯಸಭೆಯಲ್ಲಿ ಈ ಕುರಿತು ಲಿಖಿತ ಹೇಳಿಕೆ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್‌ ರೆಡ್ಡಿ, ದೇಶದಲ್ಲಿ ಒಂದೇ ಭಾಷೆ ಜಾರಿಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ. ಸಂವಿಧಾನದಲ್ಲಿ ಎಲ್ಲಾ ಭಾಷೆಗಳಿಗೂ ಸಮಾನ ಮಹತ್ವ ಕಲ್ಪಿಸಲಾಗಿದೆ. ಭಾಷಾ ವಿಷಯ ಸಂವಿಧಾನದ ಸಹವರ್ತಿ ಪಟ್ಟಿಯಲ್ಲಿ ಇದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡಕ್ಕೂ ಸಂಬಂಧಿಸಿದ್ದಾಗಿದೆ. ಭಾಷಾವಾರು ಆಧಾರದ ಮೇಲೆ ರಾಜ್ಯ ಸರ್ಕಾರಗಳಿಗೆ ಅನುದಾನಗಳನ್ನು ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿಲ್ಲ ಎಂದು ಹೇಳಿದ್ದಾರೆ.

ಒಂದು ದೇಶ, ಒಂದು ಭಾಷೆ ಮತ್ತು ಹಿಂದಿ ಏಕೈಕ ಭಾಷೆ ಎಂದು ಸಚಿವರು ಹೇಳಿದ್ದಾರಲ್ಲಾ ಎಂದು ತಮಿಳುನಾಡು ಸಂಸದ ವೈಕೊ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ,”ಒಂದು ದೇಶ, ಒಂದು ಭಾಷೆಯ ಪ್ರಸ್ತಾಪವಿಲ್ಲ” ಎಂದರು.

ಏನಿದು ವಿವಾದ:
ಸೆಪ್ಟೆಂಬರ್ ನಲ್ಲಿ ಹಿಂದಿ ದಿವಸ್​​ ಆಚರಣೆ ಮಾಡುವ ಕೇಂದ್ರ ಸರ್ಕಾರವೂ ಹಿಂದಿಯೇತರರ ಮೇಲೆ ಹೇರಿಕೆಗೆ ಮುಂದಾಗಿತ್ತು. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಸೇರಿದಂತೆ ರಾಜ್ಯ ಬಿಜೆಪಿ ನಾಯಕರ, “ಒಂದು ದೇಶ, ಒಂದು ಭಾಷೆ” ಎಂಬ ಧ್ವನಿ ಎತ್ತಿದರು. ಅಲ್ಲದೇ ಇಡೀ ಜಗತ್ತು ಭಾರತವನ್ನು ಗುರುತಿಸಲು ಏಕಮಾತ್ರ ಭಾಷೆಯ ಅಗತ್ಯವಿದೆ. ಸದ್ಯಕ್ಕೀಗ ಇಡೀ ದೇಶವನ್ನು ಒಂದು ಭಾಷೆಯ ಅಡಿಯಲ್ಲಿ ಏಕತೆಗೊಳಿಸುವ ಶಕ್ತಿ ಹಿಂದಿ ಭಾಷೆಗೆ ಮಾತ್ರ ಇದೆ ಎಂದು ಟ್ವೀಟ್​ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top