fbpx
ಸಮಾಚಾರ

ಮಹಾರಾಷ್ಟ್ರ ರಾಜಕಾರಣದಲ್ಲಿ ಸ್ಪೋಟಕ ತಿರುವು: ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ!

ಮಹಾರಾಷ್ಟ್ರ ಸರ್ಕಾರ ರಚನೆ ಕುರಿತ ಇಷ್ಟು ದಿನಗಳ ಕುತೂಹಲಕ್ಕೆ ತೆರೆಬಿದ್ದಿದ್ದು, ಬೆಳ್ಳಂಬೆಳಗ್ಗೆ ನಡೆದ ನಾಟಕೀಯ ಬೆಳವಣಿಗೆಯಲ್ಲಿ ದೇವೇಂದ್ರ ಫಡ್ನವೀಸ್ ಮತ್ತೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ ಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರು ದೇವೇಂದ್ರ ಫಡ್ನವೀಸ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಶುಕ್ರವಾರ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‍ಸಿಪಿ ನಡುವಿನ ಚರ್ಚೆಗಳು ಕೊನೆ ಹಂತ ತಲುಪಿದ್ದು, ಇಂದು ಎನ್‍ಸಿಪಿ ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚನೆಗೆ ಸಜ್ಜಾಗಿದೆ. ಈ ಹಿಂದೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಮಹಾರಾಷ್ಟ್ರ ಸಿಎಂ ಆಗಲು ಅಜಿತ್ ಪವಾರ್ ಒಮ್ಮತ ಸೂಚಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಬಿಜೆಪಿ ಜೊತೆ ಸೇರಿಕೊಂಡು ಈಗ ಉಪಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ.

ಸುಮಾರು ಒಂದು ತಿಂಗಳ ರಾಜಕೀಯ ಬಿಕ್ಕಟ್ಟಿನ ನಂತರ ಶಿವಸೇನೆ- ಎನ್ ಸಿಪಿ – ಕಾಂಗ್ರೆಸ್ ಸರ್ಕಾರ ರಚಿಸುವ ನಿರ್ಧಾರಕ್ಕೆ ಬಂದಿದ್ದವು. ಶುಕ್ರವಾರ ಮುಂಬೈನಲ್ಲಿ ನಡೆದಿದ್ದ ಸಭೆಯಲ್ಲಿ ಮೂರು ಪಕ್ಷದ ಪ್ರಮುಖರು ಈ ಬಗ್ಗೆ ಸರ್ವಾನುಮತದ ನಿರ್ಧಾರಕ್ಕೆ ಬಂದಿದ್ದರು. ಈ ಪ್ರಕಾರ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಂದಿನ ಮುಖ್ಯಮಂತ್ರಿಯಾಗುವುದೆಂದು ಬಹುತೇಕ ಖಚಿತವಾಗಿತ್ತು. ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿತ್ತು. ಆದರೆ ಶನಿವಾರ ಸೂರ್ಯನ ಕಿರಣಗಳು ಮುಂಬೈ ನಗರವನ್ನು ಮುಟ್ಟುವುದರೊಳಗೆ ಎಲ್ಲವೂ ಉಲ್ಟಾ ಪಲ್ಟಾ.

ಇನ್ನೊಂದೆಡೆ, ಇಂದು ಸರ್ಕಾರ ರಚನೆಯಾದ ಕೂಡಲೇ ರಾಷ್ಟ್ಟಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆದುಕೊಂಡಿದ್ದಾರೆ. ಕಳೆದ ನವೆಂಬರ್ 12ರಂದು ಹೇರಿಕೆಯಾಗಿದ್ದ ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆದುಕೊಳ್ಳುವುದಾಗಿ ರಾಮನಾಥ್ ಕೋವಿಂದ್ ಅಧಿಸೂಚನೆ ಹೊರಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top