fbpx
ಸಮಾಚಾರ

ವಿಶ್ವಾಸಮತಯಾಚನೆಗೂ ಮುನ್ನವೇ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ!

ಎರಡನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ದೇವೇಂದ್ರ ಫಡ್ನವಿಸ್ ಬಹುಮತ ಇಲ್ಲದ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಡಿಸಿಎಂ ಅಜಿತ್ ಪವಾರ್ ರಾಜೀನಾಮೆ ಬೆನ್ನಲ್ಲೇ ನ.26 ರಂದು ಮಧ್ಯಾಹ್ನ 3:30 ಕ್ಕೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಿಎಂ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡುವ ಘೋಷಣೆ ಮಾಡಿದ್ದಾರೆ.

ಇಂದು ಬೆಳಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಸಂಜೆ 5 ಗಂಟೆಯ ಒಳಗಡೆ ಬಹುಮತ ಸಾಬೀತು ಪಡಿಸುವಂತೆ ಬಿಜೆಪಿ ಸರ್ಕಾರಕ್ಕೆ ಸೂಚಿಸಿತ್ತು. ಈ ಆದೇಶದ ಬಳಿಕ ಸಂಖ್ಯಾಬಲ ಇಲ್ಲದ ಹಿನ್ನೆಲೆಯಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನೀಡುವುದಾಗಿ ಫಡ್ನವೀಸ್ ಪ್ರಕಟಿಸಿದ್ದಾರೆ.

ಗೋಷ್ಠಿಯಲ್ಲಿ ಮಾತನಾಡಿದ ದೇವೇಂದ್ರ ಫಡ್ನವೀಸ್​, ಭಾರತೀಯ ಜನತಾ ಪಕ್ಷಕ್ಕೆ ಸ್ಪಷ್ಟ ಜನಮತ ಸಿಕ್ಕಿತ್ತು. ಜನರ ಆದೇಶ ಬಿಜೆಪಿ ಪರವಾಗಿಯೇ ಇತ್ತು. ಅದಕ್ಕಾಗಿಯೇ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಎಂದರು. ಆದರೆ ಅಧಿಕಾರಕ್ಕಾಗಿ ಶಿವಸೇನೆ ವಾಮಮಾರ್ಗ ಹಿಡಿಯಿತು. ಶಿವಸೇನೆಯ ಜತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಾಗ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಮಾತುಕತೆಯೇ ಆಗಿರಲಿಲ್ಲ ಎಂದು ಫಡ್ನವೀಸ್​ ಹೇಳಿದರು.

ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾಗೆ ಶಿವಸೇನೆ ಕಾರಣ ಎಂದು ಆರೋಪಿಸಿದ ಫಡ್ನವೀಸ್, ಜನಾದೇಶವನ್ನು ಧಿಕ್ಕರಿಸಿ ಸೈದ್ಧಾಂತಿಕ ವಿರೋಧಿಗಳೊಂದಿಗೆ ಸೇರಿದ ಶಿವಸೇನೆ ಜನತೆಗೆ ದ್ರೋಹ ಮಾಡಿದೆ ಎಂದು ಹರಿಹಾಯ್ದರು. ಶಿವಸೇನೆಗೆ ಎರಡುವರೆ ವರ್ಷಗಳ ಅಧಿಕಾರ ನೀಡುವ ಒಪ್ಪಂದ ಎಂದೂ ಆಗಿರಲಿಲ್ಲ ಎಂದು ಸ್ಪಷ್ಟಪಡಿಸಿದ ಫಡ್ನವೀಸ್, ಸುಳ್ಳುಗಳ ಸರಮಾಲೆ ಪೋಣಿಸಿ ಅಧಿಕಾರ ಪಡೆಯುವ ಶಿವಸೇನೆಯ ಹುನ್ನಾರ ಯಶಸ್ವಿಯಾಗಿದೆ ಎಂದು ಕಿಡಿಕಾರಿದರು.

ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ಭಾರತೀಯ ಜನತಾ ಪಕ್ಷ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮೈತ್ರಿ ಸರ್ಕಾರ ರಚನೆ ಮಾಡಿತ್ತು. ಕಳೆದ ಶನಿವಾರ ಬೆಳಗ್ಗೆ ರಾಜಭವನದಲ್ಲಿ ಬಿಜೆಪಿಗೆ ಎನ್​ಸಿಪಿ ಬೆಂಬಲ ಘೋಷಿಸಿದ ಕಾರಣ, ದೇವೇಂದ್ರ ಫಡ್ನವೀಸ್​​ ಎರಡನೇ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಜತೆಗೆ ಡಿಸಿಎಂ ಆಗಿ ಎನ್​​ಸಿಪಿ ಮುಖ್ಯಸ್ಥ ಶರದ್​​ ಪವಾರ್​​ ಅಣ್ಣನ ಮಗ ಅಜಿತ್ ಪವಾರ್ ಕೂಡ ಪ್ರಮಾಣ ವಚನ ತೆಗೆದುಕೊಂಡಿದ್ದರು.

ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಎನ್​ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್​ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು. ಈ ಸಂಬಂಧ ಇಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್​, ಬುಧವಾರ ಸಂಜೆ 5 ಗಂಟೆಗೆ ಬಹುಮತ ಸಾಬೀತುಪಡಿಸುವಂತೆ ಆದೇಶಿಸಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಭಾರೀ ಬೆಳವಣಿಗೆ ಆರಂಭವಾಗಿದೆ. ಇದರ ಜತೆಯಲ್ಲೇ ಯುದ್ಧಕ್ಕೂ ಮುನ್ನ ಫಡ್ನವಿಸ್​ ಸೋಲೊಪ್ಪಿಕೊಂಡು ರಾಜೀನಾಮೆ ನೀಡಿದ್ದಾರೆ

ಇನ್ನು ಸೋಮವಾರ ಶಿವಸೇನಾ, ಎನ್​ಸಿಪಿ ಹಾಗೂ ಕಾಂಗ್ರೆಸ್ ಶಾಸಕರು ಮುಂಬೈನ ಖಾಸಗಿ ಹೋಟೆಲ್ ನಲ್ಲಿ ಶಾಸಕರ ಪರೇಡ್ ನಡೆಸುವ ಮೂಲಕ ಮಾಧ್ಯಮದ ಮುಂದೆ ಶಕ್ತಿ ಪ್ರದರ್ಶಿಸಿದ್ದವು. 162 ಶಾಸಕರು ಈ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಒಗ್ಗಟ್ಟನ್ನು ತೋರ್ಪಡಿಸಿದ್ದರು. ಇದರಿಂದಾಗಿ ಏಕಾಂಗಿಯಂತೆ ಕಂಡುಬಂದಿದ್ದ ಅಜಿತ್ ಪವಾರ್ ತಡರಾತ್ರಿ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top