fbpx
ಸಮಾಚಾರ

ಅತ್ಯಾಚಾರಿಗಳನ್ನು ಗಲ್ಲಿಗೇರಿಸುವುದಕ್ಕೆ ನನ್ನ ಸಹಮತವಿಲ್ಲಎಂದ ಪವನ್ ಕಲ್ಯಾಣ್ ವಿರುದ್ಧ ಆಕ್ರೋಶ

ತೆಲಂಗಾಣದಲ್ಲಿ ನಡೆದ ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಇಡೀ ದೇಶವನ್ನೆ ಬೆಚ್ಚಿಬೀಳಿಸಿದೆ. ಪಶು ವೈದ್ಯೆ ಹತ್ಯೆ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಜೊತೆಗೆ ದಕ್ಷಿಣ ಭಾರತೀಯ ಚಿತ್ರರಂಗದ ಕಲಾವಿದರು ಕೂಡ ಪ್ರಿಯಾಂಕಾ ರೆಡ್ಡಿ ಹತ್ಯೆ ವಿರದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಪಶುವೈದ್ಯೆಯ ಹತ್ಯೆಯ ವಿರುದ್ಧ ನಟಿ ಅನುಷ್ಕಾ ಶೆಟ್ಟಿ ಸೇರಿದಂತೆ ದಕ್ಷಿಣ ಭಾರತದ ಕಲಾವಿದರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಪ್ರಿಯಾಂಕಾ ರೆಡ್ಡಿ ಪ್ರಕರಣದ ಬಗ್ಗೆ ನಟ ಹಾಗೂ ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ನೀಡಿದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಅವರು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ಇದು ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಯಾಗಿದೆ ತಕ್ಷಣ ಕ್ಷಮೆಯಾಚಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.

ಜನಸೇನೆ ಕಾರ್ಯಕರ್ತರನ್ನುದ್ದೇಶಿಸಿ ಮಾತಾಡುವ ವೇಳೆ ಪವನ್ ಕಲ್ಯಾಣ್, ಸಹೋದರಿ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಇಡೀ ದೇಶವೇ ಒತ್ತಾಯಿಸುತ್ತಿದೆ. ಜನ ಆಕ್ರೋಶಕ್ಕೊಳಗಾಗಿ ಹೀಗೆ ಆಗ್ರಹಿಸುತ್ತಿದ್ದಾರೆ. ಸಂವಿಧಾನ ಯಾರಿಗೂ ಯಾರನ್ನು ಕೊಲ್ಲುವ ಹಕ್ಕು ನೀಡಿಲ್ಲ. ಆದ್ದರಿಂದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಬದಲಿಗೆ ಸಿಂಗಾಪುರ್ ಮಾದರಿಯಲ್ಲಿ ಶಿಕ್ಷೆ ನೀಡಬೇಕು. ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ವಿಚಾರಕ್ಕೆ ನನ್ನ ಸಹಮತವಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಸಿಂಗಾಪುರ್ ನಲ್ಲಿ ಅತ್ಯಾಚಾರಿಗಳಿಗೆ 20 ವರ್ಷ ಜೈಲು ಶಿಕ್ಷೆ, ದಂಡ ಹಾಗೂ ಕಬ್ಬಿನಿಂದ ಹೊಡೆಯುವ ಶಿಕ್ಷೆ ವಿಧಿಸಲಾಗುತ್ತದೆ.

ನಟ ಪವನ್​​ ಕಲ್ಯಾಣ್​​ ಹೇಳಿಕೆಗೀಗ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಪವನ್​​ ಕಲ್ಯಾಣ್​​ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳು ಪವನ್​​ ಮನಸ್ಥಿತಿಯನ್ನು ತೋರಿಸುತ್ತದೆ. ಇಡೀ ದೇಶವೇ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸುತ್ತಿದೆ. ಹೀಗಿರುವಾಗ ಪವನ್​ ಕಲ್ಯಾಣ್​​ ಹೇಗೆ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೋ ಎಂದು ವೈಎಸ್​ಆರ್​​ ಕಾಂಗ್ರೆಸ್​​​ ಸಂಸದ ವಿಜಯ್​​ ಸಾಯ್​​ ರೆಡ್ಡಿ ಪ್ರಶ್ನಿಸಿದ್ದಾರೆ.

ಅಂದಹಾಗೆ ಹೈದರಾಬಾದ್​ನಲ್ಲಿ ಕಳೆದ ವಾರ 26 ವರ್ಷದ ಪಶುವೈದ್ಯೆಯೊಬ್ಬರ ಮೇಲೆ ನಾಲ್ಕು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆಗೈದಿದ್ದರು. ಮಹಿಳೆಯ ಟಯರ್ ಪಂಕ್ಚರ್ ಆದಾಗ ಸಹಾಯ ಮಾಡುವ ನೆಪದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದರು. ಈ ಘಟನೆ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top