fbpx
ಸಮಾಚಾರ

ಸಾರ್ವಕಾಲಿಕ ದಾಖಲೆ ಬರೆದ ಈರುಳ್ಳಿ ಬೆಲೆ: 1 ಕೆಜಿಗೆ ರೂ.200 ತಲುಪಿದ ಉಳ್ಳಾಗಡ್ಡಿ

ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಗಗನ ಮುಟ್ಟಿದ್ದು, ಸೋಮವಾರ ಈರುಳ್ಳಿ ಬೆಲೆಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಹೆಚ್ಚಳವಾಗಿದೆ. ಕತ್ತರಿಸುವಾಗ ಮಾತ್ರವಲ್ಲದೇ ಖರೀದಿಸುವಾಗ ಗ್ರಾಹಕರು ಕಣ್ಣೀರು ಹಾಕುವಂತಾಗಿದೆ.

ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈರುಳ್ಳಿ ಕೈಗೆ ಸಿಗದ ನಕ್ಷತ್ರವಾಗಿದೆ. ಬೆಂಗಳೂರಿನ ನಗರದ ಮಾರುಕಟ್ಟೆಗಳಲ್ಲಿ ಗುಣಮಟ್ಟದ ಈರುಳ್ಳಿ ಬೆಲೆ ಒಂದು ಕೆಜಿಗೆ 200 ರೂಪಾಯಿ ಆಗಿದೆ. ಮಧ್ಯಮ ಮತ್ತು ಸಣ್ಣ ಗಾತ್ರದ ಈರುಳ್ಳಿ ಬೆಲೆ 90 ರಿಂದ 110 ರೂಪಾಯಿ ಇದೆ. ನಗರದ ರೀಟೈಲ್ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆ. ಜಿ.ಗೆ 190 ರಿಂದ 200 ರೂ. ಆಗಿದೆ. ಈರುಳ್ಳಿ ಖರೀದಿ ಮಾಡಲು ಮಾರುಕಟ್ಟೆಗೆ ಹೋದವರು ಬರಿಗೈಯಲ್ಲಿ ವಾಪಸ್ ಬರುತ್ತಿದ್ದಾರೆ. ನಗರದಲ್ಲಿ ಮುಂದಿನ ವಾರ ಈರುಳ್ಳಿ ಬೆಲೆ ಇನ್ನೂ ಹೆಚ್ಚಾದರೂ ಅಚ್ಚರಿ ಪಡಬೇಕಿಲ್ಲ.

ಅನಾವೃಷ್ಟಿಯಿಂದಾಗಿ ಈ ಬಾರಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಪರಿಣಾಮ ಉತ್ಪಾದನೆ ಕುಂಠಿತಗೊಂಡು ದೇಶಾದ್ಯಂತ ಬೆಲೆ ಗಗನಕ್ಕೇರಿ ಕುಳಿತಿದೆ. ಈ ಸಮಸ್ಯೆಯಿಂದ ಪಾರಾಗಲು ಈಗಾಗಲೇ ಕೇಂದ್ರ ಸರ್ಕಾರ ವಿದೇಶಗಳಿಂದ 6000 ಟನ್‌ ಈರುಳ್ಳಿ ಆಮದಿಗೆ ಅನುಮತಿ ನೀಡಿದೆ.

ಈರುಳ್ಳಿ ದರ ಏರಿಕೆಯಿಂದಾಗಿ ಜನರು ಆತಂಕಗೊಂಡಿದ್ದರು. ಈಗ ಹೋಟೆಲ್ ಉದ್ಯಮದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದ್ದು, ವಿವಿಧ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಸಣ್ಣ-ಪುಟ್ಟ ಹೋಟೆಲ್‌ಗಳು ಈಗಾಗಲೇ ನಷ್ಟ ಅನುಭವಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top