fbpx
ಸಮಾಚಾರ

ಸಿದ್ದರಾಮಯ್ಯಗೆ ಹೃದಯ ಶಸ್ತ್ರಚಿಕಿತ್ಸೆ: ಸ್ಟೆಂಟ್‌ ಅಳವಡಿಕೆ

ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಇಂದು ಬೆಳಗ್ಗೆ 6:30ರ ಸುಮಾರಿಗೆ ಸಿದ್ದರಾಮಯ್ಯ ಅವರಿಗೆ ರಕ್ತದೊತ್ತಡ ಜಾಸ್ತಿಯಾಗಿದ್ದು, ಸ್ವಲ್ಪ ಪ್ರಮಾಣದಲ್ಲಿ ಎದೆನೋವು ಕೂಡ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಅವರು ಆಂಜಿಯೋಪ್ಲ್ಯಾಸ್ಟ್ ಚಿಕಿತ್ಸೆ ಪಡೆದರು.

ಚುನಾವಣಾ ಪ್ರಚಾರದಿಂದ ವಾಪಸು ಬಂದ ದಿನದಿಂದಲೂ ತೀವ್ರ ಮೂತ್ರನಾಳ ಸೋಂಕು (ಯುಟಿಐ) ಸಮಸ್ಯೆಯಿಂದ ಬಳಲುತ್ತಿದ್ದ ಸಿದ್ದರಾಮಯ್ಯ ಅವರಿಗೆ ತೀವ್ರ ಚಳಿ, ಜ್ವರ ಸಮಸ್ಯೆ ಉಂಟಾಗಿತ್ತು. ಡಿ.8ರಂದು ಎದೆಯಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿತ್ತು. ಹೀಗಿದ್ದರೂ ಮೂತ್ರನಾಳ ಸೋಂಕಿಗೆ ಆ್ಯಂಟಿಬಯೋಟಿಕ್‌ ಚಿಕಿತ್ಸೆಯನ್ನು ಮಾತ್ರವೇ ತೆಗೆದುಕೊಂಡು ಸುಮ್ಮನಾಗಿದ್ದರು.

ಬುಧವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದು, ಸುಮಾರು 2 ಗಂಟೆ ತಪಾಸಣೆಯ ನಂತರ ಮನೆಗೆ ವಾಪಸಾಗಿದ್ದರು. ಮಧ್ಯಾಹ್ನದ ವೇಳೆಗೆ ಎದೆನೋವು ಕಾಣಿಸಿಕೊಂಡಿದ್ದು, ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಪಾಸಣೆ ವೇಳೆ ಹೃದಯದ ರಕ್ತನಾಳ ಕಟ್ಟಿಕೊಂಡಿರುವುದು ಗೊತ್ತಾಗಿದ್ದು, ವೈದ್ಯರು ತಕ್ಷಣ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆ ನಡೆಸಿದರು.

ಇನ್ನು ಈ ಕುರಿತು ಟ್ವೀಟ್‌ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ‘ವೈದ್ಯರ ಸಲಹೆ ಮೇರೆಗೆ ಇಂದು ಸಂಜೆ ಹೃದಯಕ್ಕೆ ಆಂಜಿಯೋಪ್ಲ್ಯಾಸ್ಟ್ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ.‌ ಸದ್ಯ ಆಸ್ಪತ್ರೆಯಲ್ಲಿದ್ದು ನಾಳೆ ಮನೆಗೆ ಹೋಗಿ ಕೆಲವು ದಿನ ವಿಶ್ರಾಂತಿ ಪಡೆಯುತ್ತೇನೆ. ಆರೋಗ್ಯವಾಗಿದ್ದೇನೆ. ಆತಂಕಪಡಬೇಕಾಗಿಲ್ಲ,’ ಎಂದಿದ್ದಾರೆ.

ಉಪ ಚುನಾವಣೆಯ ಪ್ರಚಾರದ ಚಟುವಟಿಕೆಗಳಲ್ಲಿ ಸಿದ್ದರಾಮಯ್ಯ ನಿರಂತರವಾಗಿ ಪ್ರಯಾಣಿಸಿದ್ದರು. ವಿವಿಧ ಕಾರ್ಯಕ್ರಮಗಳಲ್ಲಿ ಭಾಷಣಗಳನ್ನು ಮಾಡಿದ್ದರು. ಇದರಿಂದ ಅವರ ದೇಹ ಸಾಕಷ್ಟು ಬಳಲಿತ್ತು. ಉಪ ಚುನಾವಣೆಯಲ್ಲಿನ ಫಲಿತಾಂಶ ಕೂಡ ಅವರಿಗೆ ಹಿನ್ನಡೆಯುಂಟು ಮಾಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top