fbpx
ಸಮಾಚಾರ

ಸೋಲಿನ ಹತಾಶೆ: ಕರ್ನಾಟಕ ನಾಯಕ ಕರುಣ್ ನಾಯರ್ ಮೇಲೆ ತಮಿಳುನಾಡು ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕಿರಿಕ್!

ಕರ್ನಾಟಕ ವಿರುದ್ಧ ಗುರುವಾರ ದಿಂಡಿಗಲ್‌ನಲ್ಲಿ ಮುಕ್ತಾಯಗೊಂಡ ರಣಜಿ ಟ್ರೋಫಿ ಪಂದ್ಯದ ಬಳಿಕ ತಮಿಳುನಾಡು ತಂಡದ ಹಿರಿಯ ಆಟಗಾರ ದಿನೇಶ್‌ ಕಾರ್ತಿಕ್‌ ಉದ್ಧಟತನದಿಂದ ವರ್ತಿಸಿದ್ದು, ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಚುಟುಕು ಮಾದರಿ, ಏಕದಿನ ಅಥವಾ ಟೆಸ್ಟ್‌ ಯಾವುದೇ ಮಾದರಿಯಿರಲಿ ಕರ್ನಾಟಕ ಮತ್ತು ತಮಿಳುನಾಡಿನ ಪಂದ್ಯ ಅಂದರೆ ಒಂದಷ್ಟು ಜಿದ್ದಾಜಿದ್ದಿನ ಘರ್ಷಣೆಗಳು ಸಾಮಾನ್ಯ. ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಈ ಘರ್ಷಣೆ ಮಿತಿಮೀರಿಹೋಗುವ ಹಂತ ತಲುಪಿದೆ.

ಸೋಲಿನ ಹತಾಶೆಯಲ್ಲಿದ್ದ ಕಾರ್ತಿಕ್‌, ಪಂದ್ಯ ಮುಕ್ತಾಯಗೊಂಡ ನಂತರ ಕರ್ನಾಟಕ ನಾಯಕ ಕರುಣ್‌ ನಾಯರ್‌ ಜತೆ ವಾಗ್ವಾದಕ್ಕಿಳಿದರು. ಅಷ್ಟೇ ಅಲ್ಲ, ಬಹುಮಾನ ವಿತರಣಾ ಸಮಾರಂಭ ಮುಕ್ತಾಯಗೊಂಡ ಬಳಿಕವೂ ಜಟಾಪಟಿ ಮುಂದುವರಿಯಿತು.. ಆಟಗಾರರು ಮೈದಾನದಿಂದ ಹೊರಡಲು ಸಿದ್ಧರಾಗುತ್ತಿದ್ದ ವೇಳೆ ಡ್ರೆಸ್ಸಿಂಗ್‌ ಕೋಣೆ ಬಳಿಯೂ ಕಾರ್ತಿಕ್‌, ಕರುಣ್‌ ಮೇಲೆ ಹರಿಹಾಯ್ದರು. ಈ ಕೂಡಲೇ ಮಧ್ಯ ಪ್ರವೇಶಿಸಿದ ಕರ್ನಾಟಕ ತಂಡದ ಸಹಾಯಕ ಸಿಬ್ಬಂದಿ ಕಾರ್ತಿಕ್ ಹಾಗೂ ಕರುಣ್ ನಾಯರ್ ಅವರನ್ನು ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.

ತಮಿಳುನಾಡು ತಂಡ ಬ್ಯಾಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಕರ್ನಾಟಕ ತಂಡದ ಆಟಗಾರರು ಅತಿಯಾಗಿ ಮನವಿಯನ್ನು ಮಾಡಿರುವುದು ಹಾಗೂ ಅತಿಯಾಗಿ ಮಾತನಾಡಿರುವುದು ದಿನೇಶ್ ಕಾರ್ತಿಕ್ ಆರೋಪವಾಗಿದ್ದು, ಇದೇ ದಿನೇಶ್ ಕಾರ್ತಿಕ್ ಅಸಮಾದಾನಕ್ಕೆ ಕಾರಣವಾಗಿದೆ. ಆದರೆ, ವಯಸ್ಸಿನಲ್ಲಿ ಹಿರಿಯರಾಗಿರುವ ದಿನೇಶ್ ಕಾರ್ತಿಕ್ ಸೋಲಿನ ಬಳಿಕ ತಂಡದ ಆಟಗಾರರಿಗೆ ಧೈರ್ಯ ತುಂಬುವ ಬದಲಿಗೆ ಎದುರಾಳಿ ತಂಡದ ಆಟಗಾರರ ಮೇಲೆ ಸಿಟ್ಟಾಗಿದ್ದಕ್ಕೆ ಕೆಲ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top