fbpx
ಸಮಾಚಾರ

ರಸ್ತೆಗೆ ವಿನಯ್ ಗುರೂಜಿ ಅವರ ಹೆಸರಿಟ್ಟು ಮತ್ತೊಂದು ಎಡವಟ್ಟು ಮಾಡಿಕೊಂಡ ಬಿಬಿಎಂಪಿ

ಬಿಬಿಎಂಪಿ ಈಗ ಮತ್ತೊಂದು ಎಡವಟ್ಟು ಮಾಡುವ ಮೂಲಕ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಅವಧೂತ ಎಂದೇ ಮನೆ ಮಾತಾಗಿರುವ ವಿನಯ್ ಗುರೂಜಿ ಅವರಿಗೆ ಗೌರವ ತೋರಿಸುವ ಆತುರದಲ್ಲಿ ಬಿಬಿಎಂಪಿ ಎಡವಟ್ಟು ಮಾಡಿದೆ. ಅರೆ ಇದೇನಿದು ವಿನಯ್ ಗುರೂಜಿಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೂ ಯಾವ ರೀತಿಯ ಸಂಬಂಧ ಎನ್ನುತ್ತೀರಾ? ಮುಂದೆ ಓದಿ.

ಉತ್ತರಹಳ್ಳಿ ವಾರ್ಡ್ ರಸ್ತೆಯೊಂದಕ್ಕೆ ಬಿಬಿಎಂಪಿ ವಿನಯ್ ಗುರೂಜಿ ಎಂದು ನಾಮಕರಣ ಮಾಡಿದೆ. ಅಂದಹಾಗೆ ಈ ರಸ್ತೆಗೆ ವಿನಯ್ ಗುರೂಜಿ ಹೆಸರನ್ನು ಇಡಲು ಕಾರಣವೇನು ಎನ್ನುವುದನ್ನು ನೋಡುವುದಾದರೆ ಉತ್ತರಹಳ್ಳಿಯ ಸುಬ್ರಮಣ್ಯಪುರಂ ಪೊಲೀಸ್ ಠಾಣೆ ಸರಹದ್ದಿನಲ್ಲಿಯೇ ವಿನಯ್ ಗುರೂಜಿ ಆಶ್ರಮವಿದೆ. ಶಾಂತಿನಿಕೇತನ ಶಾಲೆಗೆ ಹೊಂದಿಕೊಂಡಂತಿರುವ ಈ ರಸ್ತೆಗೆ ಈವರೆಗೂ ಯಾವುದೇ ಹೆಸರು ಇರಲಿಲ್ಲ. ಸ್ವಾಮೀಜಿ ಅದೇ ರಸ್ತೆಯಲ್ಲಿ ಹೋಗಿ ಬರುವುದರಿಂದ ಅವರ ಹೆಸರನ್ನೇ ರಸ್ತೆಗೆ ಇಟ್ಟು ನಾಮಫಲಕ ಅಳವಡಿಸಲಾಗಿದೆ.

ರಸ್ತೆ ನಾಮಕರಣ ವಿಚಾರದಲ್ಲಿ ಏನು ನಿಯಮಗಳಿವೆ, ಯಾವ ರೀತಿ ಅದು ಪಾಲನೆಯಾಗಬೇಕು, ಯಾರ ಹೆಸರನ್ನು ಇಡಬೇಕು, ಯಾವ ಹಂತದಲ್ಲಿ ಇಡಬಾರದೆಂಬ ಕನಿಷ್ಠ ಜ್ಞಾನವೂ ಬಿಬಿಎಂಪಿಗೆ ಇದ್ದಂತಿಲ್ಲ. ಸರ್ಕಾರ ರಸ್ತೆಗಳಿಗೆ ನಾಮಕರಣ ಮಾಡಲು ಗೈಡ್‍ಲೈನ್ ರೂಪಿಸಿದೆ. 2003ರ ಹೊಸ ಕಾನೂನು ಪ್ರಕಾರ ಬದುಕಿರುವ ವ್ಯಕ್ತಿಗಳ ಹೆಸರನ್ನು ಯಾವುದೇ ರಸ್ತೆಗೆ ನಾಮಕರಣ ಮಾಡುವಂತಿಲ್ಲ.

ಯಾವುದೇ ರಸ್ತೆಗೆ ನಾಮಕರಣ ಮಾಡುವ ವೇಳೆ ಅದಕ್ಕೆ ಸಂಬಂಧಿಸಿದಂತೆ ಜಾಹೀರಾತು ನೀಡಬೇಕಾಗುತ್ತದೆ. ಸಾರ್ವಜನಿಕರಿಂದ ಸಲಹೆ-ಆಕ್ಷೇಪಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಬೇಕು. ನಂತರ ತುಲನೆ ಮಾಡಿ ಕೌನ್ಸಿಲ್ ಸಭೆಯಲ್ಲಿ ಚರ್ಚೆಗೆ ಇಟ್ಟು ಅನುಮೋದನೆ ಪಡೆದು ಕಂದಾಯ ವಿಭಾಗಕ್ಕೆ ಕಳುಹಿಸಿ ಸರ್ಕಾರಕ್ಕೆ ರವಾನೆ ಮಾಡಬೇಕು. ಮುಂದಿನದು ಸರ್ಕಾರದ ವಿವೇಚನೆಗೆ ಬಿಟ್ಟದ್ದು. ಆದರೆ ಇದಾವುದನ್ನೂಅನುಸರಿಸದೆ ಬಿಬಿಎಂಪಿಯವರು ಏಕಾಏಕಿ ವಿನಯ್ ಗುರೂಜಿ ಅವರ ಹೆಸರನ್ನು ರಸ್ತೆಗೆ ಇಟ್ಟಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top