fbpx
ಸಮಾಚಾರ

ಉನ್ನಾವ್ ಅತ್ಯಾಚಾರ: ಬಿಜೆಪಿಯ ಮಾಜಿ ಶಾಸಕ ಕುಲದೀಪ್‌ ಗೆ ಜೀವಾವಧಿ ಶಿಕ್ಷೆ ಘೋಷಿಸಿದ ಕೋರ್ಟ್‌

ಉನ್ನಾವ್ ಅತ್ಯಾಚಾರ ಮತ್ತು ಅಪಹರಣ ಪ್ರಕರಣದ ಆರೋಪಿ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಗೆ ಜೀವಾವಧಿ ಶಿಕ್ಷೆಯನ್ನು ದೆಹಲಿಯ ಟಿಸ್ ಹಜಾರಿಯ ನ್ಯಾಯಾಲಯ ಘೋಷಿಸಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ ಕಾಯ್ದೆ) ಯ ಸೆಕ್ಷನ್ 5 (ಮಗುವಿನ ಮೇಲೆ ಉಲ್ಬಣಗೊಳ್ಳುವ ಲೈಂಗಿಕ ಕಿರುಕುಳ) ಯೊಂದಿಗೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಸೆಂಗಾರ್ ಶಿಕ್ಷೆಗೊಳಗಾಗಿದ್ದಾನೆ.

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಉನ್ನಾವೋ ಅತ್ಯಾಚಾರ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ತೀಸ್ ಹಜಾರಿ ಕೋರ್ಟ್ ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಿಟಿಸಿದೆ. ಸೆಂಗಾರ್‌ಗೆ ಈ ಪ್ರಕರಣದಲ್ಲಿ 25 ಲಕ್ಷ ರೂ. ದಂಡದ ಜೊತೆಗೆ ಅತ್ಯಾಚಾರ ಸಂತ್ರಸ್ತೆಗೆ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದೆ.

ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ ಡಿ. 16 ರಂದು ಸೆಕ್ಷನ್ 376 (5,6) ಹಾಗೂ ಪೋಕ್ಸೊ ಅಡಿ ದೋಷಿ ಎಂದು ಹೇಳಿತ್ತು. 2017ರಲ್ಲಿ ಉನ್ನಾವೋ ಮೂಲದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿತ್ತು. ಅಲ್ಲದೆ ಸಂತ್ರಸ್ತೆ ಕೋರ್ಟ್ ಗೆ ತೆರಳುತ್ತಿದ್ದ ವೇಳೆ ಕೊಲೆ ಯತ್ನ ನಡೆಸಲಾಗಿತ್ತು. ಈ ಪ್ರಕರಣ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣದ ಕುರಿತು ಸಿಬಿಐ ಹಾಗೂ ಆರೋಪಿಗಳ ಪರ ವಕೀಲರಿಂದ ವಾದ ಪ್ರತಿವಾದ ಆಲಿಸಿದ್ದ ಕೋರ್ಟ್ ತೀರ್ಪು ಪ್ರಕಟಿಸಿ ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

ಏನಿದು ಪ್ರಕರಣ?:
ಉತ್ತರ ಪ್ರದೇಶದ ಉನ್ನಾವೋ ಯುವತಿ ಮೇಲೆ ಜೂನ್​,4 2017ರಲ್ಲಿ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಬಿಜೆಪಿ ಶಾಸಕನಾಗಿದ್ದ ಕುಲದೀಪ್ ಸೆಂಗಾರ್ ಜೊತೆಗೆ ಇನ್ನೂ ನಾಲ್ವರ ಹೆಸರು ಕೇಳಿಬಂದಿತ್ತು. ಆ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದರು. ಕಳೆದ ವರ್ಷ ಯುವತಿ ಕೊಲೆಗೆ ಯತ್ನ ನಡೆದಿತ್ತು. ವಕೀಲರ ಜತೆ ಕೋರ್ಟ್‌ಗೆ ಹೋಗುತ್ತಿದ್ದಾಗ ಕೊಲೆ ಯತ್ನ ನಡೆಸಲಾಗಿತ್ತು.

2018ರಿಂದಲೂ ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಆದರೆ, ರೇಪ್ ಸಂತ್ರಸ್ತೆಯ ಕುಟುಂಬದವರನ್ನು ನಾಶ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿರುವ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿತ್ತು. ಸಂತ್ರಸ್ತೆ ಮತ್ತಾಕೆಯ ಕುಟುಂಬ ಸದಸ್ಯರನ್ನು ವಾಯುಮಾರ್ಗದ ಮೂಲಕ ಉತ್ತರ ಪ್ರದೇಶದಿಂದ ಹೊರಗೆ ಕರೆ ತರಬೇಕೆಂದು ಸುಪ್ರೀಂ ಕೋರ್ಟ್ ಹೇಳಿತ್ತು. ಹಾಗೆಯೇ, ಪ್ರಕರಣದ ತನಿಖೆಯನ್ನು ಇನ್ನೊಂದು ವಾರದೊಳಗೆ ಮುಗಿಸಬೇಕೆಂದು ಸಿಬಿಐಗೆ ತಾಕೀತು ಮಾಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top