fbpx
ಸಮಾಚಾರ

‘ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಶೀಘ್ರದಲ್ಲೇ ಅಡಿಪಾಯ’ ಸಿಎಂಯಡಿಯೂರಪ್ಪ ಭರವಸೆ!

ಹಿರಿಯ ನಟ ವಿಷ್ಣುವರ್ಧನ್‌ ಸ್ಮಾರಕ ವಿವಾದ ಕೊನೆಗೂ ಬಗೆಹರಿಯುವ ಕಾಲ ಸನ್ನಿಹಿತವಾಗಿದೆ. ಸ್ಮಾರಕ ನಿರ್ಮಾಣಕ್ಕೆ ಶೀಘ್ರ ಅಡಿಪಾಯ ಹಾಕುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಬುಧವಾರ ತಮ್ಮನ್ನು ಭೇಟಿ ಮಾಡಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಈ ಭರವಸೆ ನೀಡಿದ್ದಾರೆ.

ಡಾಲರ್ಸ್ ಕಾಲೋನಿಯ ಸಿಎಂ ನಿವಾಸಕ್ಕೆ ಭೇಟಿ ನೀಡಿದ ಭಾರತಿ ಹಾಗೂ ಅಳಿಯ ಅನಿರುದ್ಧ್​ ಕೆಲ ಕಾಲ ಬಿಎಸ್​ವೈ ಜೊತೆ ಚರ್ಚೆ ನಡೆಸಿದರು. ಭೇಟಿ ನಂತರ ಮಾಧ್ಯಮಗಳ ಜೊತೆ ಭಾರತಿ ವಿಷ್ಣುವರ್ಧನ್ ಮಾತನಾಡಿದರು. “30ರಂದು ವಿಷ್ಣುವರ್ಧನ್ ಪುಣ್ಯಸ್ಮರಣೆ ಇದೆ. ಇದರ ಬಗ್ಗೆ ಕೇಳಿಕೊಂಡಿದ್ದೆವು. ಮೂರ್ನಾಲ್ಕು ದಿನಗಳಲ್ಲಿ ಸ್ಮಾರಕಕ್ಕೆ ಅಡಿಪಾಯ ಕಾರ್ಯ ಆರಂಭಿಸುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ,” ಎಂದರು ಭಾರತಿ.

ಎಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ನಡೆಯುತ್ತಿದೆ ಎನ್ನುವ ಬಗ್ಗೆಯೂ ಭಾರತಿ ಮಾಹಿತಿ ನೀಡಿದರು. “ಈಗಾಗಲೇ ಸ್ಮಾರಕ ಕಾರ್ಯ ಮೈಸೂರಿನಲ್ಲಿ ನಡೆಯುತ್ತಿದೆ‌‌.‌ ಯಡಿಯೂರಪ್ಪ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ‌‌. ವಿಷ್ಣುವರ್ಧನ್ ಯಡಿಯೂರಪ್ಪ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಅವರು ವಿಷ್ಣುವರ್ಧನ್ ಬಗ್ಗೆ ತುಂಬಾ ಗೌರವ ಇಟ್ಟುಕೊಂಡಿದ್ದಾರೆ,” ಎಂದು ಭಾರತಿ ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದು, ಸ್ಮಾರಕ ನಿರ್ಮಾಣಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಸ್ಮಾರಕ್ಕೆ ಯಾವ ಕಾರಣಕ್ಕೆ ವಿಳಂಬವಾಗಿತ್ತು ಎಂಬುದು ಅನಗತ್ಯ ವಿಷಯ. ಈಗ ಸರ್ಕಾರ ವಿಷ್ಣು ಸ್ಮಾರಕ ನಿರ್ಮಿಸಲು ಮುಂದಾಗಿರುವುದು ಎಲ್ಲರಿಗೂ ಸಂತಸ ತಂದಿದೆ. ಇದಕ್ಕಾಗಿ ನಾನು ಮುಖ್ಯಮಂತ್ರಿಗಳನ್ನು ಅಭಿನಂದಿಸುವುದಾಗಿ ಹೇಳಿದರು.

ಸ್ಮಾರಕ ನಿರ್ಮಾಣದ ವಿವಾದದ ಹಿನ್ನಲೆ:
ವಿಷ್ಣುವರ್ಧನ್‌ ಅವರ ಸಮಾಧಿ ಇರುವ ಅಭಿಮಾನ್‌ ಸ್ಟುಡಿಯೋದ ಜಾಗದಲ್ಲಿಯೇ ವಿಷ್ಣುವರ್ಧನ್‌ ಸಮಾಧಿ ನಿರ್ಮಿಸಬೇಕು ಎಂಬ ಎಲ್ಲರ ಅಭಿಲಾಷೆಗೆ ಬಾಲಕೃಷ್ಣ ಅವರ ಕುಟುಂಬ ಸದಸ್ಯರು ತಕರಾರು ಎತ್ತಿದ್ದರು. ಆಗ ವಿಷ್ಣು ಸೇನಾ ಸಮಿತಿ ಪ್ರತಿಭಟನೆ ನಡೆಸಿತ್ತು.

ಅದಾದ ನಂತರ ಸ್ಮಾರಕ ನಿರ್ಮಾಣಕ್ಕೆ ಬಾಲಕೃಷ್ಣ ಅವರ ಮಕ್ಕಳು ಒಪ್ಪಿಕೊಂಡಿದ್ದರು. ಆದರೆ, ಭಾರತಿ ವಿಷ್ಣು ವರ್ಧನ್‌ ಅವರು ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣ ಮಾಡುವ ಬಗ್ಗೆ ಪಟ್ಟಿ ಹಿಡಿದರು. ಅದಕ್ಕಾಗಿ ಸರ್ಕಾರ ಮೈಸೂರಿನ ಕಸಬಾ ಹೋಬಳಿಯ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡಿತ್ತು. ಮಂಜೂರಾತಿ ಕುರಿತು ಜಯಪುರ ಹೋಬಳಿಯ ಉದ್ಬೂರು ಗ್ರಾಮದ ಮಹದೇವಪ್ಪ ಸೇರಿದಂತೆ ಐವರು ತಕರಾರು ತೆಗೆದಿದ್ದರು.

ಈ ವ್ಯಾಜ್ಯ ಕೋರ್ಟ್‌ ಮೆಟ್ಟಿಲೇರಿತ್ತು. ಇದರಿಂದಾಗಿ ಮೈಸೂರಿನ ನಾಲ್ಕನೇ ಹೆಚ್ಚುವರಿ ಸಿವಿಲ್‌ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಕಾಮಗಾರಿ ಮುಂದುವರಿಕೆಗೆ ತಡೆ ನೀಡಿತ್ತು. ಈ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ ಸೇರಿದಂತೆ ಮೈಸೂರು ಜಿಲ್ಲಾಡಳಿತ ಹೈಕೋರ್ಟ್‌ ಮೆಟ್ಟಿಲೇರಿತ್ತು. ಏಪ್ರಿಲ್‌ನಲ್ಲಿ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅಧಿನ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತು. ಅದರಿಂದ ಸ್ಮಾರಕ ನಿರ್ಮಾಣಕ್ಕಿದ್ದ ಕಾನೂನು ತೊಡಕು ಬಗೆಹರಿದಂತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top