fbpx
ಸಮಾಚಾರ

ಧಾರ್ಮಿಕ ಅವಹೇಳನ ಪೋಸ್ಟ್‌: ಸೌದಿಯಲ್ಲಿ ಕುಂದಾಪುರ ಯುವಕ ಹರೀಶ್ ಬಂಗೇರ ಬಂಧನ!

ಧಾರ್ಮಿಕ ಅವಹೇಳನ ಹಾಗೂ ಸೌದಿ ದೊರೆಯ ಬಗ್ಗೆ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿದ ಆರೋಪದಡಿಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ಯುವಕನೊಬ್ಬನನ್ನು ಸೌದಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಹರೀಶ್ ಬಂಗೇರ ಎಂದು ತಿಳಿದುಬಂದಿದ್ದು ಕುಂದಾಪುರದ ಬೀಜಾಡಿ ಗ್ರಾಮದ ನಿವಾಸಿಯಾಗಿದ್ದಾರೆ.

 

 

ದಮಾಮ್​ನ ಅಲ್ ಹಾಸ್ ಗಲ್ಫ್ ಕಾರ್ಟೂನ್ ಫ್ಯಾಕ್ಟರಿ ಕಂಪೆನಿಯಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ತನ್ನ ಸಾಮಾಜಿಕ ಖಾತೆಯಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಮತ್ತು ಪೌರತ್ವ ಕಾಯ್ದೆಯ ಪರ ಬರೆದು ಪೋಸ್ಟ್ ಹಾಕಿದ್ದರು. ಈ ಬರಹದ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ಈತ ಪೋಸ್ಟ್ ಡಿಲೀಟ್ ಮಾಡಿ ವಿಡಿಯೋ ಮೂಲಕ ಎಲ್ಲರ ಕ್ಷಮೆಯಾಚಿಸಿದ್ದನು.

ಆದರೆ ಅದಾಗಲೇ ಹರೀಶ್ ಹಾಕಿದ್ದ ಪೋಸ್ಟ್​ ಸ್ಕ್ರೀನ್ ಶಾಟ್ ಮೂಲಕ ವೈರಲ್ ಮಾಡಲಾಗಿತ್ತು. ಆ ಬಳಿಕ ತನ್ನ ಫೇಸ್​ಬುಕ್ ಖಾತೆಯನ್ನು ಹರೀಶ್ ಡಿ ಆ್ಯಕ್ಟೀವ್ ಮಾಡಿದ್ದ ಎಂದು ಹೇಳಲಾಗಿದೆ. ಆದರೆ ಹರೀಶ್ ಕಾಸರಗೋಡಿನಲ್ಲಿರುವ ವ್ಯಕ್ತಿಯೊಬ್ಬ ಹರೀಶ್ ಫೇಸ್ ಬುಕ್ ಅಕೌಂಟಿನ ನಕಲಿ ಖಾತೆ ತೆರೆದು ಸೌದಿ ರಾಜನ ವಿರುದ್ದ ಅವಹೇಳನಕಾರಿ ಪೋಸ್ಟ್ ಜೊತೆಗೆ ಮೆಕ್ಕಾದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಬಗ್ಗೆ ಪೋಸ್ಟ್ ಮಾಡಿದ್ದಾರೆ ಎಂದು ಕುಟುಂಬ ಮೂಲಗಳು ಹೇಳುತ್ತಿವೆ.

ಹರೀಶ್ ಬಂಗೇರ ಮಾಡಿರುವ ಅವಹೇಳನಕಾರಿ ಪೋಸ್ಟ್‌ಗಳ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ವಜಾಗೊಳಿಸಿ, ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ಕೆಲಸ ಮಾಡುತ್ತಿದ್ದ ಗಲ್ಫ್ ಕಾರ್ಟನ್ ಫ್ಯಾಕ್ಟರಿ ತಿಳಿಸಿದೆ. ಹರೀಶ್ ಬಂಗೇರ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್‌ಗಳು, ಅವರನ್ನು ಸೌದಿ ಪೊಲೀಸರು ಬಂಧಿಸಿ ಕರೆದೊಯ್ಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top