fbpx
ಸಮಾಚಾರ

ಕಿತ್ತು ತಿನ್ನುವ ಬಡತನದ ನಡುವೆಯೂ ಖಜಾನೆ ಅಧಿಕಾರಿಯಾಗಿ ತರಕಾರಿ ಮಾರುವವರ ಮಗಳು!

ಗೆಲುವೆಂಬುದು ‘ಮಾರು ದೂರ ನಡೆದಾಕ್ಷಣ ಎದುರಾಗಿ ಬಿಡುವ ಮಾಯಾದಂಡ’ ಅಂತಾ ನಂಬಿ ಕೂತ ಅನೇಕರಿದ್ದಾರೆ. ಆದರದು ಕೈಕಾಲಿನ ಕಸುವನ್ನೆಲ್ಲ ಬಸಿದು ಪ್ರಯತ್ನಿಸಿದರೂ ಸಿಕ್ಕಂತೆ ಮಾಡಿ ಆಟವಾಡಿಸೋ ಮಾಯಾವಿ ಎಂಬ ವಿಚಾರ ಕಷ್ಟ ಪಟ್ಟವರಿಗೆ, ಅದರ ಫಲವಾಗಿಯೇ ಗೆದ್ದವರಿಗಲ್ಲದೆ ಬೇರ‍್ಯಾರಿಗೂ ಅರ್ಥವಾಗಲು ಸಾಧ್ಯವಿಲ್ಲ. ಈಗ ಯಾಕೆ ಮಾತು ಅಂತೀರಾ? ಯಾವುದೇ ಸೌಲಭ್ಯ ಇಲ್ಲದಿದ್ದರೂ ಇಚ್ಛಾಶಕಿಯೊಂದು ಇದ್ದರೆ ಸಾಕು ಸಾಧನೆ ಸಾಧ್ಯ ಎನ್ನುವುದನ್ನು ಊರಿಂದ ಊರಿಗೆ ಅಳೆದು ತರಕಾರಿ ಮಾರಾಟ ಮಾಡುವವರ ಮಗಳು ತೋರಿಸಿದ್ದಾಳೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಧರ್ಮಪುರದ ಮಂಜುನಾಥಪ್ಪ ಮತ್ತು ಜಯಮ್ಮರ ದ್ವಿತೀಯ ಪುತ್ರಿ ವಿನೋದಮ್ಮ ಖಜಾನೆ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರು ಎದೆಗುಂದದೇ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಉಚಿತ ಶಿಕ್ಷಣ ಪಡೆದು ಎಂ. ವಿನೋದಮ್ಮ ಯಶಸ್ಸುಗಳಿಸಿದ್ದಾರೆ.

ಶಿರಾ ತಾಲೂಕಿನ ಬೆಜ್ಜಿಹಳ್ಳಿ ಮೂಲದವರಾದ ವಿನೋದಮ್ಮನವರ ಪೋಷಕರು ಕಳೆದ 25 ವರ್ಷಗಳ ಹಿಂದೆ ಹಿರಿಯೂರು ತಾಲೂಕಿನ ಧರ್ಮಪುರಕ್ಕೆ ಜೀವನೋಪಾಯಕ್ಕಾಗಿ ಶಿಫ್ಟ್ ಆಗಿದ್ದರು. ತಮ್ಮ ಮಕ್ಕಳ ಅಭ್ಯುದಯಕ್ಕಾಗಿ ಬೆಳಗಿನ ಕೊರೆಯುವ ಚಳಿಯಲಿ ಮಾರುಕಟ್ಟೆ ಹಾಗೂ ತೋಟಗಳಿಗೆ ತೆರಳಿ ತರಕಾರಿಗಳನ್ನು ಖರೀದಿಸಿ ಅದನ್ನು ಮಾರಾಟ ಮಾಡುತ್ತಾ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿರುವ ವಿನೋದಮ್ಮನವರ ಪೋಷಕರು ಇಂದು ಮಗಳ ಸಾಧನೆ ಕಂಡು ಬೆರಗಾಗಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಬೆಡ್ತೂರು ಮೊರಾರ್ಜಿ ವಸತಿ ಶಾಲೆಯಲ್ಲಿ ವಿನೋದಮ್ಮ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಪದವಿ ಪೂರ್ವ ಕಾಲೇಜು ಶಿಕ್ಷಣವನ್ನು ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಿಎಸ್ಸಿ ನರ್ಸಿಂಗ್‌ ಪದವಿ ಪಡೆದಿದ್ದಾರೆ. ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ನರ್ಸಿಂಗ್‌ ಕೆಲಸ ಮಾಡುತ್ತ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ ಯಶಸ್ಸು ಕಂಡಿದ್ದಾರೆ.

ವಿನೋದಮ್ಮ ಪ್ರತಿಭಾವಂತ ವಿದ್ಯಾರ್ಥಿ. ಪಿಯು ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದರು. ವೈದ್ಯಕೀಯ ಶಿಕ್ಷಣಕ್ಕೆ ಸೀಟು ಕೂಡ ಸಿಕ್ಕಿತ್ತು. ಆದರೆ, ಮನೆಯ ಆರ್ಥಿಕ ಪರಿಸ್ಥಿತಿ ವೈದ್ಯಕೀಯ ಶಿಕ್ಷಣ ಪಡೆಯುವಷ್ಟು ಉತ್ತಮವಾಗಿರಲಿಲ್ಲ. ಉಚಿತ ಪ್ರವೇಶ ಹಾಗೂ ವಸತಿ ವ್ಯವಸ್ಥೆ ಇರುವ ಶಿಕ್ಷಣ ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಇವರ ಮುಂದಿತ್ತು. ಹೀಗಾಗಿ, ವೈದ್ಯಕೀಯ ಶಿಕ್ಷಣದ ಆಸೆಯನ್ನು ಬದಿಗಿಟ್ಟು, ಅರೆವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದರು.

2011 ಹಾಗೂ 2014ರಲ್ಲಿ ಕೆಪಿಎಸ್‍ಸಿ ಪರೀಕ್ಷೆ ಬರೆದಿದ್ದ ವಿನೋದಮ್ಮ ಮುಖ್ಯ ಪರೀಕ್ಷೆ ಬರೆದರೂ ಸಂದರ್ಶನದ ಅವಕಾಶ ಕೈತಪ್ಪಿತ್ತು. ಆದರೆ ಕಾರ್ಮಿಕ ಇಲಾಖೆ, ಪಂಚಾಯ್ತಿ ರಾಜ್ ಇಲಾಖೆಯ ಅಧಿಕಾರಿ ಆಗಬೇಕು ಎಂಬ ಅವರ ಛಲ ಅವರನ್ನು ಸುಮ್ಮನೆ ಕೂರುವಂತೆ ಮಾಡಲಿಲ್ಲ. ನಿರಂತರ ಪರಿಶ್ರಮದಿಂದ ಛಲಬಿಡದೇ ಪ್ರಯತ್ನಿಸಿದ ಅವರ ಶ್ರಮಕ್ಕೆ ಇಂದು ಫಲ ಸಿಕ್ಕಿದೆ.

ಇನ್ನು ವಿನೋದಮ್ಮ ಅವರಿಗೆ ಇಬ್ಬರು ಸಹೋದರಿಯರು ಹಾಗೂ ಒಬ್ಬ ಸಹೋದರ ಇದ್ದಾರೆ. ತರಕಾರಿ ಮಾರಾಟ ಮಾಡಿ ಬರುತ್ತಿದ್ದ ಆದಾಯದಲ್ಲಿ ಕುಟುಂಬ ನಡೆಸುವುದು ಮಂಜುನಾಥ ಅವರಿಗೆ ಕಷ್ಟವಾಗಿತ್ತು. ಉಚಿತ ಶಿಕ್ಷಣ ಸಿಗುವ ಸಂಸ್ಥೆಗಳಿಗೆ ಮಕ್ಕಳನ್ನು ದಾಖಲು ಮಾಡುತ್ತಿದ್ದರು. ಪೋಷಕರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಮಕ್ಕಳು ವ್ಯಾಸಂಗ ಮಾಡಿದ್ದಾರೆ. ಮೊದಲ ಪುತ್ರಿ ಮುಖ್ಯ ಶಿಕ್ಷಕಿಯಾಗಿದ್ದಾರೆ. ಮತ್ತೊಬ್ಬ ಪುತ್ರಿ ಗೀತಮ್ಮ ಎಂ.ಟೆಕ್‌ ಶಿಕ್ಷಣ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದಾರೆ. ಕಿರಿಯ ಪುತ್ರ ಶಾಂತರಾಜು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕಷ್ಟಪಡುತ್ತಲೇ ತಾನೇನಾದರೂ ಸಾಧಿಸುತ್ತೇನೆಂಬ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಛಲವಿದ್ದರೆ ಯಾವುದೇ ಸೌಲಭ್ಯವಿಲ್ಲದೆಯೂ ಸಾಧನೆ ಮಾಡಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟ ವಿನೋದಮ್ಮ ಅವರ ಕನಸೆಲ್ಲವೂ ನನಸಾಗಲೆಂದು ಹಾರೈಸೋಣ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top