fbpx
ಸಮಾಚಾರ

“ಡಿಸಿಎಂ ಸ್ಥಾನ ನೀಡದಿದ್ದರೆ ರಾಜೀನಾಮೆ” ಶ್ರೀರಾಮುಲು ಬಾಂಬ್

ವಾಲ್ಮೀಕಿ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಕೊಡದಿದ್ದರೆ ನಾನು ಸೇರಿದಂತೆ ಸಮುದಾಯದ ಎಲ್ಲ ಶಾಸಕರು ರಾಜೀನಾಮೆ ನೀಡುತ್ತೇವೆ ಎಂದು ಅರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ರಾಯಚೂರಿನ ಸಿಂಧನೂರಿನಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಅವರು, ವಾಲ್ಮೀಕಿ ಸಮುದಾಯಕ್ಕೆ ಒಂದು ಡಿಸಿಎಂ ಹುದ್ದೆ ಕೊಡಲೇಬೇಕು, ಇಲ್ಲದಿದ್ದರೆ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಹೇಳಿದ ಹಾಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಹುದ್ದೆಯನ್ನು ರಮೇಶ್ ಜಾರಕಿಹೊಳಿ ಸೇರಿದಂತೆ ಸಮುದಾಯದ ಯಾರಿಗಾದರೂ ಕೊಟ್ಟರೂ ಅದನ್ನು ನಾನು ಸ್ವಾಗತಿಸಿತ್ತೇನೆ. ಡಿಸಿಎಂ ಹುದ್ದೆಯನ್ನು ನನಗೆ ನೀಡಬೇಕು ಎಂದೇನೂ ಬೇಡಿಕೆ ಇಟ್ಟಿಲ್ಲ, ನನಗೆ ಡಿಸಿಎಂ ಹುದ್ದೆ ನೀಡಬೇಕು ಎಂಬುದು ಅಭಿಮಾನಿಗಳ, ಕಾರ್ಯಕರ್ತರ ಅಭಿಪ್ರಾಯವಾಗಿದೆ. ಒಟ್ಟಿನಲ್ಲಿ ವಾಲ್ಮೀಕಿ ಸಮುದಾಯದ ಯಾರಾದರೂ ಒಬ್ಬರಿಗೆ ಡಿಸಿಎಂ ಹುದ್ದೆಯನ್ನು ನೀಡಬೇಕು” ಎಂದರು.

ಇನ್ನು ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಿಎಂ ಬಿಎಸ್‍ವೈ ನೂರಕ್ಕೆನೂರು 7.5 ಮೀಸಲಾತಿ ಕೊಟ್ಟೇ ಕೊಡುತ್ತಾರೆ. ಮೀಸಲಾತಿ ಕೊಡದಿದ್ದರೆ ಶ್ರೀಗಳ ಮಾತಿಗೆ ನಾವೆಲ್ಲರೂ ಬದ್ಧರಾಗಿದ್ದೇವೆ. ಸ್ವಾಮೀಜಿಗಳ ಮಾತನ್ನು ಯಾವುದೇ ಕಾರಣಕ್ಕೂ ನಾವು ಮೀರುವುದಿಲ್ಲ. 7.5 ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ, ಮೀಸಲಾತಿ ಘೋಷಣೆಗೆ ಯಾವುದೇ ದಿನಾಂಕ ನಿಗದಿಯಾಗಿಲ್ಲ ಸರ್ಕಾರದ ನಡೆಯನ್ನು ಕಾದು ನೋಡುತ್ತೇವೆ ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top