fbpx
ಸಮಾಚಾರ

ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಇನ್ನಿಲ್ಲ

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ (88) ಭಾನುವಾರ ನಿಧನರಾದರು.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಡಿ.20ರಂದು ಮುಂಜಾನೆ 3 ಗಂಟೆ ಸುಮಾರಿಗೆ ಮಣಿಪಾಲದ ಕಸ್ತೂರ ಬಾ (ಕೆಎಂಸಿ) ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯುಮೋನಿಯಾ ಚಿಕಿತ್ಸೆ ಜತೆಗೆ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಕೆಎಂಸಿಯ ಆರು ತಜ್ಞ ವೈದ್ಯರು ಅವರ ಆರೋಗ್ಯದ ಬಗ್ಗೆ ನಿಗಾವಹಿಸಿದ್ದರು.

ಶ್ರೀಗಳ ಕೊನೆಯ ಆಸೆಯಂತೆ ಅವರನ್ನು ಇಂದು ವೆಂಟಿಲೇಟರ್ ಸಹಿತ ಅಂಬುಲೆನ್ಸ್ ಮೂಲಕ ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠಕ್ಕೆ ಆಸ್ಪತ್ರೆಯಿಂದ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಅವರಿಗೆ 6 ಮಂದಿ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಠದಲ್ಲಿಯೇ ಶ್ರೀಗಳು ಕೃಷ್ಣೈಕ್ಯರಾದರು.

ರಕ್ತದೊತ್ತಡ, ಮಧುಮೇಹ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳು ಕಳೆದ ಶುಕ್ರವಾರ ಬೆಳಗಿನ ಜಾವ 5 ಗಂಟೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 9 ದಿನಗಳಿಂದ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತಿತ್ತು. ವಿಶ್ವೇಶತೀರ್ಥ ಸ್ವಾಮೀಜಿಯ ಆರೋಗ್ಯ ಗುರುವಾರದಿಂದಂದ ಹೆಚ್ಚೇನೂ ಸುಧಾರಣೆಯಾಗಿರಲಿಲ್ಲ. ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿಯಲ್ಲಿದೆ ಎಂದು ಕೆಎಂಸಿ ವೈದ್ಯರು ತಿಳಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top