fbpx
ಸಮಾಚಾರ

ದಿಢೀರ್ ಕುಸಿತ ಕಂಡ ಈರುಳ್ಳಿ ಬೆಲೆ: ಗ್ರಾಹಕರು ನಿರಾಳ

ಈರುಳ್ಳಿ ಹೆಸರು ಕೇಳಿದರೆ ಬೆಚ್ಚಿಬೀಳುವಂತಾಗಿದ್ದ ಗ್ರಾಹಕರು ಕೊನೆಗೂ ಸುಧಾರಿಸಿಕೊಳ್ಳುವಂತಾಗಿದೆ. ಕೆ.ಜಿ.ಗೆ ದ್ವಿಶತಕದ ಗಡಿ ತಲುಪಿದ್ದ (200 ರೂ) ಈರುಳ್ಳಿ ದರ, ಎರಡು ತಿಂಗಳ ನಂತರ ಅರ್ಧಶತಕಕ್ಕಿಂತಲೂ ಕಡಿಮೆಯಾಗಿದೆ. ಇದು ಗ್ರಾಹಕರ ಸಂಕ್ರಾಂತಿ ಸಂಭ್ರಮವನ್ನು ಹೆಚ್ಚಿಸಿದೆ.

ಮಹಾರಾಷ್ಟ್ರದಿಂದ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದರಿಂದ ದರ ಇಳಿಕೆಯಾಗಿದೆ. ಪ್ರತಿ ಕೆಜಿಗೆ ಸೋಮವಾರ ಕೆ.ಆರ್. ಮಾರುಕಟ್ಟೆಯಲ್ಲಿ ಈರುಳ್ಳಿ 40ರಿಂದ 50 ರೂ.ಗೆ ಮಾರಾಟವಾಯಿತು. ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಈರುಳ್ಳಿ ಪ್ರತಿ ಕೆ.ಜಿ.ಗೆ 20 ರೂ.ಗೆ ಮಾರಾಟವಾದ್ರೆ, ಉತ್ತಮ ಗುಣಮಟ್ಟದ ಈರುಳ್ಳಿ 40ರಿಂದ 42 ರೂ. ಹಾಗೂ ಟರ್ಕಿ ಈರುಳ್ಳಿ 10 ರಿಂದ 20 ರೂ.ಗೆ ಮಾರಾಟವಾಯಿತು.

ನೆರೆ ಹಾಗೂ ಬರ ಪರಿಸ್ಥಿತಿಯಿಂದ ಮುಂಗಾರು ಹಂಗಾಮಿನ ಈರುಳ್ಳಿ ರೈತರ ಕೈಸೇರಿರಲಿಲ್ಲ. ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದಲ್ಲಿ ಸುರಿದ ಭಾರಿ ಮಳೆಗೆ ಈರುಳ್ಳಿ ಬೆಳೆ ನಷ್ಟವಾಗಿತ್ತು. ಚಿತ್ರದುರ್ಗ ಸೇರಿ ಹಲವೆಡೆ ಸಮಯಕ್ಕೆ ಸರಿಯಾಗಿ ಮುಂಗಾರು ಮಳೆ ಬೀಳದ ಪರಿಣಾಮ ನಿರೀಕ್ಷಿತ ಪ್ರಮಾಣದ ಬೆಳೆ ಬಂದಿರಲಿಲ್ಲ. ಹೀಗಾಗಿ, ಚಿತ್ರದುರ್ಗದಲ್ಲಿಯೇ ಕೆ.ಜಿ. ಈರುಳ್ಳಿ ಬೆಲೆ ₹ 200ಕ್ಕೆ ಏರಿತ್ತು.

ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ದಿನಕ್ಕೊಂದು ಬೆಲೆ ಕಾಣುತ್ತಿತ್ತು. ಸುಮಾರು ಮೂರು ತಿಂಗಳು ಕೆ.ಜಿ. ಈರುಳ್ಳಿ ಬೆಲೆ ₹ 100ಕ್ಕಿಂತ ಕಡಿಮೆ ಆಗಿರಲಿಲ್ಲ. ಇದು ಹೋಟೆಲ್‌ ಹಾಗೂ ಅಡುಗೆ ಮನೆಯ ಆಹಾರ ಪದಾರ್ಥಗಳ ಮೇಲೂ ಪ್ರಭಾವ ಬೀರಿತ್ತು. ಸದ್ಯ ಕರ್ನಾಟಕ, ಮಹಾರಾಷ್ಟ್ರದಿಂದ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವುದರಿಂದ ದರ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top