fbpx
ಸಮಾಚಾರ

ಮಂಗಳೂರು ಬಾಂಬ್‌ ಕೇಸ್‌: ಯಾರು ಈ ಶಂಕಿತ ಆದಿತ್ಯ ರಾವ್‌?

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ವಿಮಾನ ನಿಲ್ದಾಣದ ಬಾಂಬ್​ ಪತ್ತೆ ಪ್ರಕರಣದ ಆರೋಪಿ ಆದಿತ್ಯ ರಾವ್ ಎಂಬಾತ ಪೊಲೀಸರಿಗೆ ಶರಣಾಗಿದ್ದಾನೆ. ಆದಿತ್ಯ ರಾವ್ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಐಜಿಪಿ ನೀಲಮಣಿರಾಜು ಅವರ ಎದುರು ಬುಧವಾರ ಬೆಳಿಗ್ಗೆ ಸುಮಾರು 8.40ರ ಸುಮಾರಿಗೆ ಶರಣಾಗಿದ್ದಾನೆ. ಆದಿತ್ಯ ರಾವ್​ ಉಡುಪಿ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ.

‘ಪೊಲೀಸ್ ಮೂಲಗಳ ಪ್ರಕಾರ ಮಣಿಪಾಲ ಮೂಲದ ಆದಿತ್ಯ ರಾವ್ ಎಂಬಾತ ‘ಬಾಂಬ್ ಇಟ್ಟಿದ್ದು ನಾನೇ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರ ಕಚೇರಿಗೆ ಆಗಮಿಸಿ ಶರಣಾಗಿ ತನ್ಮ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಸ್ತುತ ಆರೋಪಿಯನ್ನು ಹಲಸೂರುಗೇಟ್ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಠಾಣೆಯ ಇನ್‌ಸ್ಟೆಕ್ಟರ್ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಯಾರು ಈ ಶಂಕಿತ ಆದಿತ್ಯ ರಾವ್‌?
ಉಡುಪಿಯ ಮಣಿಪಾಲ ಮೂಲದ ಎಂಜಿನಿಯರ್ ಆಗಿರುವ ಆದಿತ್ಯ ರಾವ್ ಈ ಹಿಂದೆಯೂ ಹುಸಿಬಾಂಬ್ ಕರೆ ಮಾಡಿ ಜೈಲು ಶಿಕ್ಷೆ ಅನುಭವಿಸಿದ್ದ. 2012ರಲ್ಲಿ ಖಾಸಗಿ ಬ್ಯಾಂಕಲ್ಲೂ ಕೆಲಸ ಮಾಡಿದ್ದ ಈತ ಬೆಂಗಳೂರಿನಲ್ಲಿ ಈ ಹಿಂದೆ ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಬೆದರಿಕೆ ಹಾಕಿದ್ದ. ಹುಸಿಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ 9 ತಿಂಗಳು ಜೈಲುವಾಸ ಅನುಭವಿಸಿದ್ದ. ಜೈಲುವಾಸ ಬಳಿಕ ಕೆಲಸ ಸಿಗದೇ ಮಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.

ಕುಂದಾಪುರ ಮೂಲದ ಆರೋಪಿ, ಉಡುಪಿಯ ಮಣಿಪಾಲ್‌ನ ಕೆಎಚ್‌ಬಿ ಕಾಲೊನಿಯಲ್ಲಿ ಕೆಲ ವರ್ಷಗಳ ಕಾಲ ವಾಸವಿದ್ದ. ಮಣಿಪಾಲ್‌ದಲ್ಲೇ 2007ರಲ್ಲಿ ಎಂಬಿಎ ಪದವಿ ಮುಗಿಸಿ ಕೆಲಸ ಅರಸಿ ಬೆಂಗಳೂರಿಗೆ ಬಂದು ಎಂ.ಜಿ.ರಸ್ತೆಯಲ್ಲಿರುವ ಪ್ರತಿಷ್ಠಿತ ಬಹುರಾಷ್ಟ್ರೀಯ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಒಂದು ವರ್ಷದ ಬಳಿಕ ಅಲ್ಲಿ ಕೆಲಸ ತೊರೆದು, ಮತ್ತೊಂದು ಬ್ಯಾಂಕ್‌ನಲ್ಲಿ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಹುದ್ದೆಗೆ ಸೇರಿದ್ದ. ಅಲ್ಲಿ ಬರೀ ಆರು ತಿಂಗಳು ಕೆಲಸ ಮಾಡಿ, ಮತ್ತೆ ಈ ಹಿಂದೆ ಕೆಲಸ ಮಾಡಿದ್ದ ಬ್ಯಾಂಕ್‌ನಲ್ಲೇ ಕೆಲಸಕ್ಕೆ ಸೇರಿದ್ದ. ಬ್ಯಾಂಕ್‌ನಲ್ಲಿ ಉತ್ತಮ ವೇತನ ದೊರಕುತ್ತಿತ್ತು. ಆದರೆ, ಆ ಕೆಲಸವನ್ನು ಬಿಟ್ಟು ಮೂಡಬಿದರೆಯ ಆಳ್ವಾಸ್‌ ಕಾಲೇಜಿನಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಕೆಲ ದಿನ ಕೆಲಸ ಮಾಡಿ ಮಂಗಳೂರಿನ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಗಾರ್ಡ್‌ ಕೆಲಸಕ್ಕೆ ಸೇರಿದ್ದ.

ಆದಿತ್ಯ ರಾವ್‌ 2018ರಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣ ಸ್ಫೋಟಿಸುವುದಾಗಿ ಹುಸಿ ಬೆದರಿಕೆ ಕರೆ ಮಾಡಿ, ಬಂಧಿತನಾಗಿದ್ದ. ಈತ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದು ಕೆಲವೊಂದು ತಾಂತ್ರಿಕ ಕಾರಣದಿಂದ ಆತನ ಅರ್ಜಿ ವಜಾಗೊಂಡಿತ್ತು. ಇದೇ ಕೋಪದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಬೆದರಿಕೆ ಹಾಕಿದ್ದ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top