fbpx
ಸಮಾಚಾರ

ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಿಜೆಪಿಗೆ ಸೇರ್ಪಡೆ

ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಸೈನಾ ನೆಹ್ವಾಲ್ ಅವರಿಗೆ ಬಿಜೆಪಿಗೆ ಶಾಲನ್ನು ಹಾಕುವ ಮೂಲಕ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಸೈನಾ ಅವರೊಂದಿಗೆ ಅವರ ಸಹೋದರಿ ಚಂದ್ರಾನ್ಶು ಕೂಡ ಬಿಜೆಪಿ ಸೇರಿಕೊಂಡಿದ್ದಾರೆ.

ಹರಿಯಾಣದ ಹಿಸಾರ್ ಮೂಲದವರಾದ ಸೈನಾ ನೆಹ್ವಾಲ್ ಬುಧವಾರ ನಡೆದ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರ ತಾರಾ ಪ್ರಚಾರಕರಾಗಿ ಅವರು ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸೈನಾ, “ನಾನು ನರೇಂದ್ರ ಮೋದಿ ಅವರಿಂದ ಪ್ರೇರಣೆಗೊಂಡು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ನಾನು ದೇಶಕ್ಕಾಗಿ ಹಲವು ಪದಕಗಳನ್ನು ಗೆದ್ದುಕೊಂಡಿದ್ದೇನೆ. ನಾನು ಕಠಿಣ ಪರಿಶ್ರಮ ಪಡುವ ವ್ಯಕ್ತಿಯಾಗಿದ್ದು, ಕಠಿಣ ಪರಿಶ್ರಮ ಪಡುವ ವ್ಯಕ್ತಿಗಳನ್ನು ನಾನು ಇಷ್ಟ ಪಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಕಠಿಣ ಪರಿಶ್ರಮ ಪಡುವ ವ್ಯಕ್ತಿ. ಹೀಗಾಗಿ ಇವರ ಜೊತೆ ಸೇರಿಕೊಂಡು ದೇಶಕ್ಕಾಗಿ ಕೆಲಸ ಮಾಡಬೇಕೆಂಬ ಆಸೆಯಿದೆ” ಎಂದು ಹೇಳಿದರು.

ಅಂದಹಾಗೆ 29ರ ಹರೆಯದ ಸೈನಾ ನೆಹ್ವಾಲ್ 2012ರ ಲಂಡನ್ ‌ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಸಾಧನೆ ಮಾಡಿದ್ದರು. ಈ ಮೂಲಕ ಒಲಿಂಪಿಕ್ ಕಂಚಿನ ಪದಕ ಗೆದ್ದ ಭಾರತದ ಮೊದಲ ಬ್ಯಾಡ್ಮಿಂಟನ್ ಪಟು ಎಂಬ ಚಾರಿತ್ರಿಕ ದಾಖಲೆ ಬರೆದಿದ್ದರು. ಇನ್ನು 2015ರ ಜಕಾರ್ತ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಹಾಗೂ 2017ರ ಗ್ಲಾಸ್‌ಗೌ ಮಹಿಳಾ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು .

ಸೈನಾ ಸಾಧನೆಯನ್ನು ಪರಿಗಣಿಸಿದ ಭಾರತೀಯ ಸರಕಾರ 2009ರಲ್ಲಿ ಅರ್ಜುನ ಪ್ರಶಸ್ತಿ, 2010ರಲ್ಲಿ ಪದ್ಮ ಶ್ರೀ, 2009-10ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು 2016ರಲ್ಲಿ ಪದ್ಮ ಭೂಷಣ್ ಪ್ರಶಸ್ತಿ ನೀಡಿ ಗೌರವಿಸಿತ್ತು. 2018ರಲ್ಲಿ ಭಾರತೀಯ ಪುರುಷ ಬ್ಯಾಡ್ಮಿಂಟನ್ ಪಟು ಪರುಪ್ಪಳ್ಳಿ ಕಶ್ಯಪ್‌ರನ್ನು ಸೈನಾ ವರಿಸಿದ್ದರು. ಇದೀಗ ರಾಜಕೀಯ ರಂಗಕ್ಕೆ ಧುಮುಕುವ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top