fbpx
ಸಮಾಚಾರ

ಐತಿಹಾಸಿಕ ದೇವಸ್ಥಾನವಾದ ‘ಶಬರಿ ಕೊಳ್ಳ’ ವನ್ನು ಇನ್ನಾದರೂ ಅಭಿವೃದ್ಧಿಗೊಳಿಸಿ!

ಭವ್ಯ ರಾಮ ಮಂದಿರದ ನಿರ್ಮಾಣಕ್ಕೆ, ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಕೇಂದ್ರ ಸರ್ಕಾರ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ನು ಸ್ಥಾಪನೆಯ ಬೆನ್ನಲ್ಲೇ ನಮ್ಮ ಕರ್ನಾಟಕದಲ್ಲೇ ಐತಿಹ್ಯವುಳ್ಳ ಪ್ರಭು ಶ್ರೀ ರಾಮರ ಪರಮ ಭಕ್ತೆಯಾಗಿದ್ದ ಶಬರಿಯ ಕ್ಷೇತ್ರವೊಂದು ಸರ್ಕಾರ, ಅಧಿಕಾರಿಗಳ ನಿರ್ಲಕ್ಷ್ಯದಿಂದ, ಪ್ರಚಾರದ ಕೊರತೆಯಿಂದ ಅಭಿವೃದ್ಧಿಯನ್ನು ಕಾಣದೆ ಉಳಿದಿದೆ.

 

 

ಎಲ್ಲಿದೆ ಶಬರಿ ಕೊಳ್ಳ?
ಪ್ರಭು ಶ್ರೀ ರಾಮನ ಪರಮ ಭಕ್ತೆಯಯಾಗಿದ್ದ ಶಬರಿಯ ದೇವಸ್ಥಾನ ವಾದ ‘ಶಬರಿ ಕೊಳ್ಳ’ – ಬೆಳಗಾವಿ ಜಿಲ್ಲೆಯ, ರಾಮದುರ್ಗ ತಾಲೂಕಿನ ಸುರೇಬಾನ ಹಳ್ಳಿಯಲ್ಲಿದೆ. ಶಬರಿ ತನ್ನ ಪೂಜ್ಯ ದೇವನಾದ ಶ್ರೀ ರಾಮನನ್ನು ಈ ವನದಲ್ಲಿ ಕಾಯುತ್ತಿದ್ದಳು ಎಂದು ಹೇಳಲಾಗುತ್ತದೆ. ಈ ದೇವಸ್ಥಾನದ ಮೂಲ ದೇವರು ಹಾಗು ಗ್ರಾಮ ದೇವತೆ ಶಬರಿ. ಅತ್ಯಂತ ಶ್ರದ್ದೆಯಿಂದ ಪೂಜೆಯನ್ನು ಮಾಡಲಾಗುತ್ತದೆ.

ಈ ಸ್ಥಳಕ್ಕೆ ಶಬರಿವನವೆಂದೂ ಕರೆಯಲಾಗುತ್ತದೆ. ಈ ದೇವಸ್ಥಾನದ ಆವರಣದಲ್ಲಿ ಎರಡು ಕೊಳಗಳಿವೆ. ಒಂದು ಕೊಳದಲ್ಲಿ ಎಷ್ಟೇ ಬಿರುಬಿಸಿಲಿದ್ದರೂ, ಜಲಕ್ಷಾಮ, ಬರವಿದ್ದರೂ ನೀರಿನ ಮಟ್ಟ ಕುಸಿಯುವುದಿಲ್ಲ. ಇಲ್ಲಿನ ಸಿಹಿ ನೀರನ್ನು ಒಮ್ಮೆ ಕುಡಿದರೆ, ಮತ್ತೆ ಮತ್ತೆ ಕುಡಿಯಬೇಕೆನ್ನಿಸುತ್ತದೆ. ಈ ದೇವಸ್ಥಾನ ಸುಮಾರು 800-1000 ವರ್ಷಗಳಷ್ಟು ಹಳೆಯದಾಗಿದ್ದು, ಚಾಲುಕ್ಯ ಶಿಲ್ಪಕಲೆಯನ್ನು ಹೋಲುತ್ತದೆ ಎಂದು ಇತಿಹಾಸಗಾರರು ಹೇಳುತ್ತಾರೆ. ಇಲ್ಲಿ ರಾಮ-ಲಕ್ಷ್ಮಣ, ಹನುಮಂತ ಮೂರ್ತಿಗಳು ಪ್ರತಿಷ್ಠಾಪನೆ ಗೊಂಡಿದೆ.

 

 

ತಲುಪುವುದು ಹೇಗೆ?
ಬೆಂಗಳೂರಿನಿಂದ ರಾಮದುರ್ಗಕ್ಕೆ ತಲುಪಿ ಅಲ್ಲಿಂದ ಬಸ್ ಮೂಲಕ ಸುರೇಬಾನ ಗ್ರಾಮ (ಶಬರಿ ಕೊಳ್ಳಕ್ಕೆ) ಹೋಗಬಹುದು. ಬೆಳಗಾವಿಯಿಂದ 120 ಕಿಲೋಮೀಟರ್ ಆಗುತ್ತದೆ. ರೈಲಿನಲ್ಲಿ ಪ್ರಯಾಣ ಮಾಡಲಿಚ್ಛಿಸುವವರು ಬಾದಾಮಿ ರೈಲ್ವೆ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ರಸ್ತೆ ಮಾರ್ಗವಾಗಿ ಸುರೇಬಾನ ಗ್ರಾಮ ತಲುಪಬಹುದು.

ವಿಶೇಷ ದಿನಗಳು
ಪ್ರಕೃತಿಯ ಮಡಿಲಿನಲ್ಲಿರುವ ಈ ದೇವಸ್ಥಾನದಲ್ಲಿ ಅಮಾವಾಸ್ಯೆ, ರಾಮನವಮಿಯನ್ನು ಹಾಗು ಲಕ್ಷದೀಪೋತ್ಸಸದ ಸಂದರ್ಭದಲ್ಲಿ ಅತ್ಯಂತ ವಿಜೃಂಭಣೆಯಿಂದ, ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ಸ್ಥಳೀಯರಾದ ಪ್ರಶಾಂತ್ ರವರು ಹೇಳುವಂತೆ ಇಲ್ಲಿ ಸುತ್ತ ಮುತ್ತಲಿರುವ ಹಳ್ಳಿಯ ಶಾಲಾ ಮಕ್ಕಳಿಗೆ ಇದು ಪಿಕ್ನಿಕ್ ಜಾಗವಾಗಿದೆ. ಸೂಕ್ತ ಮಾರ್ಗರ್ದರ್ಶದ ಕೊರತೆ, ನಾಮಫಲಕಗಳು, ಸಾರಿಗೆ ವ್ಯವಸ್ಥೆ ಮತ್ತು ಯಾತ್ರಿಗಳಿಗೆ ಇಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಲ್ಲಿ, ಇಲ್ಲಿ ಇನ್ನೂ ಹೆಚ್ಚು ಜನರು ಬರುತ್ತಾರೆ ಎಂದು ಹೇಳುತ್ತಾರೆ. ಬೆಂಗಳೂರಿನವರಾದ ಸುನಿಲ್ ಅವರು ಈ ಸ್ಥಳಕ್ಕೆ ಭೇಟಿ ನೀಡಿದಾಗ, ಇಲ್ಲಿರುವ ದೇವಳದ ಬಗ್ಗೆ ಇನ್ನಷ್ಟು ಮಾಹಿತಿ ಹಾಗು ಪ್ರಚಾರದ ಕೊರತೆ ಇದೆ ಎಂದು ಗೊತ್ತಾಯಿತು. ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಸ್ಥಳೀಯ ರಾಜಕಾರಣಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಿ, ಕ್ಷೇತ್ರದ ಸರ್ವತೋನ್ಮುಖ ಅಭಿವೃದ್ಧಿಗೆ ಊರಿನ ಜನರೂ ಸೇರಿದಂತೆ ಎಲ್ಲರೂ ಕೆಲಸ ಮಾಡುತ್ತೇವೆ ಎಂದು ಹೇಳುತ್ತಾರೆ.

ಸುನಿಲ್ ಅವರು ಹೇಳುವಂತೆ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಆದ ಭೀಕರ ನೆರೆಯಿಂದ ತತ್ತರಿಸಿದ್ದ ಬೆಳಗಾವಿ ಜಿಲ್ಲೆಗೆ, ಪರಿಹಾರ ಸಾಮಗ್ರಿಗಳನ್ನೂ ಬೆಂಗಳೂರಿನಿಂದ ಬೆಳಗಾವಿಗೆ ತೆಗೆದುಕೊಂಡು ಹೋಗಿ, ಅಲ್ಲಿನ ಸ್ಥಳೀಯ ಕಾರ್ಯಕರ್ತರಿಗೆ ಕೊಟ್ಟು, ಬೆಂಗಳೂರಿಗೆ ಹಿಂದಿರುಗುವಾಗ, ಅಲ್ಲಿನ ಕೆಲ ಕಾರ್ಯಕರ್ತರು ಈ ಜಾಗದ ಬಗ್ಗೆ ಹೇಳಿ, ದರ್ಶನ ಪಡೆದು ಹೋಗಿ ಎಂದು ತಿಳಿಸಿದರು, ಎಂದು ಸುನಿಲ್ ಹೇಳುತ್ತಾರೆ. ಅಷ್ಟೇ ಅಲ್ಲದೆ ಪ್ರಭು ರಾಮಚಂದ್ರರು ಭಾರತದಲ್ಲಿ ಓಡಾಡಿದ ಎಲ್ಲ ಐತಿಹಾಸಿಕ ಜಾಗಗಳನ್ನು ಗುರುತಿಸಿ, ಆ ಪುರಾಣ ಐತಿಹ್ಯಗಳನ್ನು ವಿವರಿಸುವಂತ ಕೆಲಸ ಆಗಬೇಕು ಎಂದು ಸುನಿಲ್ ಅವರು ಹೇಳುತ್ತಾರೆ. ಇಲ್ಲಿರುವ ಇನ್ನೊಂದು ವಿಶೇಷತೆ ಏನೆಂದರೆ ಈ ದೇವಳದಲ್ಲಿ ಪೂಜೆ ಮಾಡುವ ಅರ್ಚಕರು, ಅಯೋಧ್ಯೆಯಿಂದ ಬಂದು ನೆಲಸಿರುತ್ತಾರೆ.

ರಾಜಾಜಿನಗರ ಬಿ.ಜೆ.ಪಿ ಯುವ ಮೋರ್ಚಾದ ಉಪಾಧ್ಯಕ್ಷರು ಹಾಗೂ ಸಾಮಾಜಿಕ ಜಾಲತಾಣ (ರಾಜಾಜಿನಗರದ) ಸಂಚಾಲಕರು ಆಗಿರುವ ಸುನಿಲ್ ಅವರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ನಿರ್ಲಕ್ಷ್ಯ ಯಾಕೆ?
ಈ ದೇಗುಲವನ್ನು ಅಭಿವೃದ್ಧಿಗೊಳಿಸಲು ಜಿಲ್ಲಾಡಳಿತವಾಗಲಿ, ಪ್ರವಾಸೋದ್ಯಮ ಇಲಾಖೆಯಾಗಲಿ ಹೆಚ್ಚಿಗೆ ಕೆಲಸ ಮಾಡಿಲ್ಲ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಮಾತ್ರ ಜನ ಸೇರುವುದು ಬಿಟ್ಟರೆ, ಈ ಕ್ಷೇತ್ರದ ಬಗ್ಗೆ ಹೆಚ್ಚು ಮಾಹಿತಿ ಯಾರಿಗೂ ಇಲ್ಲ. ದೇಗುಲವನ್ನು ಪ್ರವಾಸೋದ್ಯಮ ಇಲಾಖೆ ಹಾಗು ಜಿಲ್ಲಾಡಳಿತ ಅಭಿವೃದ್ಧಿಗೊಳಿಸಿದ್ದಲ್ಲಿ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡಿದಂತಾಗುತ್ತದೆ. ಹಾಗೆಯೇ, ಸ್ಥಳೀಯ ಯುವಕರಿಗೆ ಉದ್ಯೋಗ ಸಿಗುತ್ತದೆ ಮತ್ತು ಅಂಗಡಿ-ಮುಂಗಟ್ಟುಗಳಿಂದ ಅನೇಕರ ಜೀವನೋಪಾಯಕ್ಕೆ ಸಹಕಾರವಾಗುತ್ತದೆ ಎಂದು ಈ ಕ್ಷೇತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ಸ್ಥಳೀಯರಾದ ಪ್ರಶಾಂತ್ ಎನ್ನುವವರು.

ಪ್ರಭು ಶ್ರೀ ರಾಮ ಸಂಚರಿಸಿದ ಎಲ್ಲ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಬೇಕಾಗಿರುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ ಎಂದು ಸುನಿಲ್ ಅವರು ಹೇಳುತ್ತಾರೆ. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಅವರು, ಈ ಸುಂದರ ಶಬರಿ ಕೊಳ್ಳ ವನ್ನು ಅಭಿವೃದ್ಧಿ ಮಾಡಲು ಅನೇಕರ ಜೊತೆ ಚರ್ಚೆ ಹಾಗು ಮಾರ್ಗದರ್ಶನ ಪಡೆದಿದ್ದಾರೆ.

ನಿರ್ಲಕ್ಷ್ಯಗೊಂಡಿರುವ ಸುರೇಬಾನ ಗ್ರಾಮದ ಶಬರಿ ಕೊಳ್ಳವನ್ನು ಇನ್ನಾದರೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಗುರುತಿಸಿ ಇದರ ಬಗ್ಗೆ ಸೂಕ್ತ ಮಾಹಿತಿ ಹಾಗು ಪ್ರಚಾರ ನೀಡಲಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top