fbpx
ಸಮಾಚಾರ

ಫೈನಲ್ ಪಂದ್ಯದ ಬಳಿಕ ಆಟಗಾರರ ಮಧ್ಯೆ ಕಿತ್ತಾಟ: ಭಾರತೀಯ ಆಟಗಾರರ ಮೇಲೆ ‘ಬಾಂಗ್ಲಾ’ ಕ್ರಿಕೆಟಿಗರ ಹಲ್ಲೆ?

ಟೀಮ್ ಇಂಡಿಯಾ ವಿರುದ್ಧದ ಫೈನಲ್ ಪಂದ್ಯ ಗೆಲ್ಲೋ ಮೂಲಕ ಬಾಂಗ್ಲಾದೇಶ ಅಂಡರ್-19 ತಂಡ ಇದೇ ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದಿದೆ. ಇಲ್ಲಿನ ಪೋಶೆಫ್​ಸ್ಟ್ರೂಮ್ ನಗರದಲ್ಲಿ ನಡೆದ ಫೈನಲ್ ಕಾದಾಟದಲ್ಲಿ ಯಂಗ್ ಇಂಡಿಯಾ ವಿರುದ್ಧ ಬಾಂಗ್ಲಾ ಜೂನಿಯರ್ ತಂಡ 3 ವಿಕೆಟ್​​​ಗಳಿಂದ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಭಾರತೀಯರ ಹ್ಯಾಟ್ರಿಕ್ ವಿಶ್ವಕಪ್ ಕನಸನ್ನು ಬಾಂಗ್ಲಾ ಹುಲಿಗಳು ಧ್ವಂಸ ಮಾಡಿದವು.

ಆದರೆ ಫೈನಲ್ ಪಂದ್ಯ ಮುಗಿದ ನಂತರ ಬಾಂಗ್ಲಾದೇಶ ಮತ್ತು ಭಾರತ ತಂಡದ ಆಟಗಾರರ ನಡುವೆ ಕಿತ್ತಾಟ ನಡೆದಿದೆ. ಅಥರ್ವ ಅಂಕೋಲೆಕರ್ ಎಸೆತದಲ್ಲಿ ಒಂದು ರನ್ ಗಳಿಸಿದ ಕೂಡಲೇ ಬಾಂಗ್ಲಾ ಆಟಗಾರರು ಸಂಭ್ರಮದಿಂದ ಓಡಿಕೊಂಡು ಮೈದಾನ ಪ್ರವೇಶಿಸಿದರು. ಈ ವೇಳೆ ಕೆಲ ಆಟಗಾರರು ಭಾರತದ ಆಟಗಾರರ ಮುಂದೆ ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವೇಳೆ ಕಿತ್ತಾಟ ನಡೆದಿದೆ.

 

 

ಟಿವಿ ಕ್ಯಾಮೆರಾಗಳು ಹೊಡೆದಾಟದ ದೃಶ್ಯವನ್ನು ಸರಿಯಾಗಿ ತೋರಿಸದ ಕಾರಣ ಆರಂಭದಲ್ಲಿ ಯಾರು ಯಾರಿಗೆ ಹೊಡೆದಿದ್ದಾರೆ ಎನ್ನುವುದರ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ಬಾಂಗ್ಲಾ ಆಟಗಾರರು ಉದ್ದೇಶಪೂರ್ವವಾಗಿ ಭಾರತದ ಆಟಗಾರರು ನಿಂತಿದ್ದ ಸ್ಥಳಕ್ಕೆ ಹೋಗಿ ವಿಚಿತ್ರವಾಗಿ ವರ್ತನೆ ಮಾಡುತ್ತಿರುವ ಕೆಲ ಸಕೆಂಡ್ ವಿಡಿಯೋಗಳು ಮೊಬೈಲ್ ಕ್ಯಾಮೆರಾದಲ್ಲಿ ದೂರದಿಂದ ಸೆರೆಯಾಗಿದೆ. ಇಬ್ಬರು ಬಾಂಗ್ಲಾ ಆಟಗಾರರು ಓಡಿಕೊಂಡು ಬಂದು ಭಾರತ ಆಟಗಾರರ ಮುಂದೆ ವಿಚಿತ್ರವಾಗಿ ಸಂಭ್ರಮಾಚರಣೆ ಮಾಡಿರುವ ವಿಡಿಯೋ ಸೆರೆಯಾಗಿದೆ. ಈ ಸಂಭ್ರಮಾಚರಣೆಯ ಬೆನ್ನಲ್ಲೇ ಆಟಗಾರರು ಬಡಿದಾಡಿಕೊಂಡಿದ್ದಾರೆ.

ಇದಾದ ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ಬಾಂಗ್ಲಾ ತಂಡದ ನಾಯಕ ಅಕ್ಬರ್ ಅಲಿ, ‘ಪಂದ್ಯದ ನಂತರ ಏನಾಗಿದೆಯೋ ಅದು ಅನಿವಾರ್ಯವಾಗಿ ನಡೆದದ್ದು. ನಮ್ಮ ಕೆಲವು ಬೌಲರ್​​ಗಳು ಎಮೋಷನಲ್ ಆಗಿ ಉತ್ತೇಜನಕ್ಕೆ ಒಳಗಾಗಿದ್ದರು. ಹೀಗಾಗಿ ಈ ಘಟನೆ ನಡೆದಿದ್ದು, ಇದು ಖಂಡಿತಾ ದುರದೃಷ್ಟಕರ. ನಾನು ಟೀಮ್ ಇಂಡಿಯಾವನ್ನ ಅಭಿನಂದಿಸುತ್ತೇನೆ’ ಎಂದು ಹೇಳಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top