fbpx
ಸಮಾಚಾರ

ಕರ್ನಾಟಕಕ್ಕೆ ಮೋದಿ ಸರ್ಕಾರದಿಂದ ‘ಮಹಾಮೋಸ’: ಉದ್ಯೋಗ ಸೃಷ್ಟಿಗೆ ಬಿತ್ತು ಕತ್ತರಿ!

ರಾಜ್ಯಕ್ಕೆ ನೀಡುವ ಅನುದಾನದಲ್ಲಿ ಪ್ರತಿ ಬಾರಿ ತಾರತಮ್ಯ ಮಾಡುವ ಕೇಂದ್ರ ಸರ್ಕಾರವು ಈ ಬಾರಿಯೂ ಮಲಧೋರಣೆ ತಾಳಿದೆ. 7 ವರ್ಷಗಳ ಹಿಂದೆ ಲೋಕಸಭಾ ಚುನಾವಣೆ ಘೋಷಣೆಗೂ ಕೆಲವೇ ಕ್ಷಣಗಳ ಮುನ್ನ ಶಂಕುಸ್ಥಾಪನೆ ಮಾಡಲಾದ ರೈಲ್ವೇ ಕೋಚ್ ಫ್ಯಾಕ್ಟರಿ ಯೋಜನೆಯನ್ನು ಮೋದಿ ಸರ್ಕಾರ ಕೈಬಿಟ್ಟಿದೆ! ಕೇಂದ್ರ ಸರ್ಕಾರ ಕೋಚ್ ಫ್ಯಾಕ್ಟರಿ ಬದಲಾಗಿ ವರ್ಕ್ ಶಾಪ್ ಮಾಡಲು ಮುಂದಾಗಿರುವುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನ ಸಬ್ ಅರ್ಬನ್ ರೈಲು ಯೋಜನೆ ಜೊತೆಗೆ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ 2ನೇ ಶಾಕ್ ನೀಡಿದೆ. ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆಗೆ ನಿರ್ಧಾರ ಮಾಡಲಾಗಿತ್ತು. ಆದರೆ ಇದೀಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈಲ್ವೆ ಕೋಚ್ ಫ್ಯಾಕ್ಟರಿ ಬದಲು ವರ್ಕ್ ಶಾಪ್ ಸ್ಥಾಪನೆ ಮಾಡಲು ಮುಂದಾಗಿದೆ. ರೈಲ್ವೆ ಬಜೆಟ್‌ನ ಪಿಂಕ್ ಬುಕ್‌ನಲ್ಲಿ ಈ ಮಾಹಿತಿ ಕೂಡ ಬಹಿರಂಗವಾಗಿದೆ.

ಕೇಂದ್ರದ ನಿರ್ಧಾರದಿಂದ ಕರ್ನಾಟಕದ ಯುವಕರಿಗೆ ಉದ್ಯೋಗ ಖೋತಾ ಆಗುವ ಸಾಧ್ಯತೆಯಿದ್ದು, ರಾಜ್ಯದಲ್ಲಿನ ಉದ್ಯೋಗ ಸೃಷ್ಟಿಸುವ ಆಸೆಗೆ ಕಲ್ಲು ಬಿದ್ದಂತಾಗಿದೆ. ಕೋಲಾರದಲ್ಲಿ ಕೋಚ್ ಫ್ಯಾಕ್ಟರಿ ನಿರ್ಮಾಣವಾಗಿದ್ದರೆ ಬರೋಬ್ಬರಿ 5 ಸಾವಿರ ಯುವಕರಿಗೆ ಉದ್ಯೋಗ ಸಿಗುವ ನಿರೀಕ್ಷೆ ಮಾಡಲಾಗಿತ್ತು. ಇದೀಗ ರೈಲ್ವೆ ವರ್ಕ್ ಶಾಪ್ ನಿರ್ಮಾಣದಿಂದ ಕೇವಲ 2 ಸಾವಿರ ಉದ್ಯೋಗ ಅಷ್ಟೇ ಸೃಷ್ಟಿಯಾಗಲಿದೆ ಎನ್ನಲಾಗಿದೆ.

ಕಳೆದ 7 ವರ್ಷಗಳಿಂದ ಕೋಚ್ ಫ್ಯಾಕ್ಟರಿ ಆಗುತ್ತೆ, ಉದ್ಯೋಗವಕಾಶಗಳು ಹೆಚ್ಚೆಚ್ಚು ಸಿಗುತ್ತೆ ಎಂದುಕೊಂಡಿದ್ದ ಕೋಲಾರ ಭಾಗದ ಜನರಿಗೆ ನಿರಾಸೆ ಮೂಡಿದೆ. ಸದ್ಯ ವರ್ಕ್ ಶಾಪ್‍ನಿಂದಾಗಿ 2 ಸಾವಿರ ಉದ್ಯೋಗ ಮಾತ್ರ ಸೃಷ್ಟಿಯಾಗಲಿದ್ದು, ಅದು ಕೂಡ ಯಾವಾಗ ಆಗುತ್ತೆ ಎಂಬುದು ಇನ್ನೂ ಕಾದು ನೋಡಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top