fbpx
ಸಮಾಚಾರ

ಉಸೇನ್ ಬೋಲ್ಟ್ ದಾಖಲೆ ಮುರಿದ ಕಂಬಳ ವೀರ ಶ್ರೀನಿವಾಸ್ ಗೌಡ!

ಓಟದಲ್ಲಿ ವಿಶ್ವದಾಖಲೆ ನಿರ್ಮಿಸಿರುವ ಉಸೇನ್ ಬೋಲ್ಟ್ ಅನ್ನೇ ಮೀರಿಸುವ ವೇಗದ ಓಟವನ್ನು ಮಾಡಿದ್ದಾರೆ ದಕ್ಷಿಣ ಕನ್ನಡದ ಕಂಬಳ ವೀರ ಶ್ರೀನಿವಾಸ್ ಗೌಡ. ವಿಶ್ವದ ಫಾಸ್ಟೆಸ್ಟ್ ರನ್ನರ್ ಉಸೇನ್ ಬೋಲ್ಟ್‌ನ ದಾಖಲೆಯನ್ನು ಪುಡಿಪುಡಿ ಮಾಡಿ ಹೊಸ ಭಾಷ್ಯ ಬರೆದಿದ್ದಾರೆ. ಉಸೇನ್ ಬೋಲ್ಟ್ 100 ಮೀ. ಓಟವನ್ನು ಕೇವಲ 9.58 ಸೆಕೆಂಡ್ ಅವಧಿಯಲ್ಲಿ ಕ್ರಮಿಸಿದರೆ, ಶ್ರೀನಿವಾಸ ಗೌಡ ಕಂಬಳ ಗದ್ದೆಯ ಕೆಸರಿನಲ್ಲಿ ಕೋಣಗಳ ಜೊತೆ 100 ಮೀಟರ್‍ನ್ನು ಕೇವಲ 9.55 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ದಾಖಲೆ ಬರೆದಿದ್ದಾರೆ.

2009ರಲ್ಲಿ 100 ಮೀಟರ್ ಓಟವನ್ನು ಕೇವಲ 9.58ಸೆಕೆಂಡ್​​ನಲ್ಲಿ ಕ್ರಮಿಸಿ ಉಸೇನ್ ಬೋಲ್ಟ್​​ ವಿಶ್ವದಾಖಲೆ ನಿರ್ಮಿಸಿದ್ರು. ದಕ್ಷಿಣ ಕನ್ನಡ ಜಿಲ್ಲೆಯ ಐಕಳ ಬಾವಾ ಎಂಬಲ್ಲಿ ಫೆಬ್ರವರಿ 1ರಂದು ಜನಪದ ಕ್ರೀಡೆ ಕಂಬಳ ಕೂಟ ನಡೆಯಿತು. ಇದರಲ್ಲಿ ಮೂಡಬಿದಿರೆಯ ಮಿಯಾರು ಗ್ರಾಮದ ಶ್ರೀನಿವಾಸ ಗೌಡ ಎಂಬ 28ರ ಯುವಕ ಓಟಗಾರ ಉಸೇನ್ ಬೋಲ್ಟ್​​​ ಸಾಧನೆಯನ್ನೂ ಮೀರಿಸಿದ್ದಾನೆ.

ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ತುಳುನಾಡಿನ ಸಾಂಪ್ರದಾಯಿಕ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ ಅವರು 142.50 ಮೀಟರ್‌ ಕರೆ(ಕಂಬಳದ ಕೋಣಗಳ ಟ್ರ್ಯಾಕ್‌)ಯನ್ನು ಕೇವಲ 13.62 ಸೆಕೆಂಡಲ್ಲಿ ಕ್ರಮಿಸಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದ್ದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಮಾತ್ರವಲ್ಲದೆ ಇದೀಗ ಶ್ರೀನಿವಾಸ ಗೌಡ ಅವರನ್ನು ಉಸೇನ್‌ ಬೋಲ್ಟ್‌ ಜೊತೆ ಹೋಲಿಸಲಾಗುತ್ತಿದೆ.

ಶ್ರೀನಿವಾಸ ಗೌಡ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಂದಿಗೆ ತಾಳೆ ಹಾಕಿ ನೋಡಿದರೆ ಅದು 9.55 ಸೆಕೆಂಡ್‌ ಆಗುತ್ತದೆ. ಇಲ್ಲಾ ಬೋಲ್ಟ್‌ ವಿಶ್ವದಾಖಲೆ ಗಣನೆಗೆ ತೆಗೆದುಕೊಂಡಲ್ಲಿ ಅವರಿಗೆ 142.50 ಮೀ. ಕ್ರಮಿಸುವುದಕ್ಕೆ ಬೇಕಾಗಬಲ್ಲ ಸಮಯ 13.65 ಸೆಕೆಂಡ್‌. ಹೇಗೆ ತಾಳೆ ಹಾಕಿದರೂ ವಿಶ್ವನಾಥ್‌ ಗೌಡ ಅವರು ಉಸೇನ್‌ ಬೋಲ್ಟ್‌ಗಿಂತ 0.03 ಸೆಕೆಂಡ್‌ಗಳಷ್ಟುಮುಂದಿದ್ದಾರೆ.

ಯಾವ ತರಬೇತಿಯನ್ನೂ ಪಡೆಯದೆ ಶ್ರೀನಿವಾಸ ಗೌಡ ತಮ್ಮ ಸ್ವಂತ ಆಸಕ್ತಿಯಿಂದ ಕಂಬಳ ಕ್ಷೇತ್ರದಲ್ಲಿ ತೊಡಗಿಸಿಕೊಂಡು ದಾಖಲೆ ಮಾಡಿದ್ದಾರೆ. ಈ ಋತುವಿನ ಕಂಬಳ ಕ್ರೀಡಾಕೂಟದಲ್ಲಿ ಅತೀ ಹೆಚ್ಚು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಕಂಬಳ ಕೂಟದ ಚಿನ್ನದ ಓಟಗಾರನಾಗಿ ಪ್ರಸಿದ್ಧಿಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top