fbpx
ಸಮಾಚಾರ

ನಟ ದರ್ಶನ್ ಬರ್ತಡೇಯಲ್ಲಿ ಪೊಲೀಸ್ ಪೇದೆ ಮೇಲೆ ಹಲ್ಲೆ: ದರ್ಶನ್ ಕೊಟ್ಟ ಹಣವನ್ನು ತಿರಸ್ಕರಿಸಿದ ಪೊಲೀಸರು

ದರ್ಶನ್ ಜನ್ಮದಿನದಂದು, ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸಕ್ಕೆ ಅಭಿಮಾನಿಗಳು ಸಾಗರೋಪಾದಿಯಲ್ಲಿ ಬಂದಿದ್ದರು! ಈ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಕಾನ್‌ಸ್ಟೇಬಲ್‌ ದೇವರಾಜ್ ಮೇಲೆ ದರ್ಶನ್‌ ಅಭಿಮಾನಿ ಎನ್ನಲಾದವರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಈಗಾಗಲೇ ದೇವರಾಜ್​​ಗೆ ಖಾಸಗಿ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಚಿಕಿತ್ಸಾ ವೆಚ್ಚ ‘ಆರೋಗ್ಯ ಭಾಗ್ಯ’ ಯೋಜನೆ ವ್ಯಾಪ್ತಿಗೆ ಬಾರದ ಹಿನ್ನೆಲೆ, ವಿಶೇಷ ಪ್ರಕರಣವೆಂದು ಪರಿಗಣಿಸಿ ಹಿರಿಯ ಅಧಿಕಾರಿಗಳೇ ದೇವರಾಜ್ ಅವರ ಚಿಕಿತ್ಸಾ ವೆಚ್ಚವನ್ನು ಭರಿಸಲು ನಿರ್ಧಾರ ಮಾಡಿದ್ದಾರೆ. ಈ ಮಧ್ಯೆ ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿದ ದರ್ಶನ್​ರ ವ್ಯವಸ್ಥಾಪಕ, ದೇವರಾಜ್ ಅವರ ಚಿಕಿತ್ಸಾ ವೆಚ್ಚಕ್ಕಾಗಿ 2 ಲಕ್ಷ ರೂ. ನೀಡುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆ ಪೊಲೀಸರು, ವ್ಯವಸ್ಥಾಪಕರನ್ನ ತರಾಟೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

‘ನಿಮ್ಮ ಬೇಜವಾಬ್ದಾರಿಯಿಂದಲೇ ನಮ್ಮ ಕುಟುಂಬದ ಸದಸ್ಯ ಆಸ್ಪತ್ರೆ ಸೇರಿದ್ದಾನೆ. ಹಣ ನೀಡಿದ ಮಾತ್ರಕ್ಕೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ‌’ ಎಂದು ತಿರುಗೇಟು ನೀಡಿರುವುದಾಗಿ ಮೂಲಗಳು ತಿಳಿಸಿವೆ. ‘ನಿಮ್ಮ ಹಣದ ಅವಶ್ಯಕತೆ ನಮಗಿಲ್ಲ. ನೀವು ಕಾನೂನು ಕ್ರಮ ಎದುರಿಸಲೇಬೇಕು’ ಎಂದು ಅಧಿಕಾರಿ ಹೇಳಿದ್ದಾರೆ ಎನ್ನಲಾಗಿದೆ!

ಏನಿದು ವಿವಾದ?
‘ಐಡಿಯಲ್ ಹೋಮ್ ಲೇಔಟ್‌ನಲ್ಲಿರುವ ದರ್ಶನ್ ಮನೆ ಎದುರು ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿಯ ಭದ್ರತೆಗಾಗಿ ದೇವರಾಜ್ ಅವರನ್ನು ನಿಯೋಜಿಸಲಾಗಿತ್ತು. ಕಾರ್ಯಕ್ರಮ ಸ್ಥಳದಲ್ಲಿ ಅಭಿಮಾನಿಗಳು ಸರದಿಯಲ್ಲಿ ಹೋಗಲು ಆಯೋಜಕರು ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ, ನೂಕುನುಗ್ಗಲು ಉಂಟಾಗಿತ್ತು. ನೂಕುನುಗ್ಗಲು ನಿಯಂತ್ರಿಸುವ ಕೆಲಸದಲ್ಲಿ ದೇವರಾಜ್ ನಿರತರಾಗಿದ್ದರು. ಅದೇ ಸಂದರ್ಭದಲ್ಲಿ ಅವರ ಮೂಗಿಗೆ ಅಭಿಮಾನಿಯೊಬ್ಬರು ಪಂಚ್‌ ಮಾಡಿದ್ದರು. ಕಣ್ಣಿಗೂ ತೀವ್ರ ಹಾನಿ ಆಗಿ ರಕ್ತ ಸೋರುತ್ತಿತ್ತು. ಸಹೋದ್ಯೋಗಿಗಳೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು’ ಎಂದು ಪೊಲೀಸರು ಹೇಳಿದರು.

“ಜ್ಞಾನಭಾರತಿ ಠಾಣೆ ಕಾನ್‌ಸ್ಟೇಬಲ್‌ ದೇವರಾಜ್‌ ಹಲ್ಲೆಗೊಳಗಾಗಿದ್ದು, ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ದರ್ಶನ್‌ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿದ್ದ ವ್ಯವಸ್ಥಾಪಕರು ಹಾಗೂ ಅಪರಿಚಿತ ಅಭಿಮಾನಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅವರೆಲ್ಲರ ವಿರುದ್ಧ, ಅಪರಾಧ ಸಂಚು (ಐಪಿಸಿ 34) ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ (ಐಪಿಸಿ 353) ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top