fbpx
ಸಮಾಚಾರ

ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಟೀಂ ಇಂಡಿಯಾದ ಖ್ಯಾತ ಬೌಲರ್!

ಟೀಂ ಇಂಡಿಯಾ ಮಾಜಿ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ನಿವೃತ್ತ ಘೋಷಿಸಿದ್ದಾರೆ. ಪ್ರಗ್ಯಾನ್ ಓಜಾ ಅವರು ಈ ವಿಚಾರವನ್ನು ಟ್ವಿಟರ್‍ನಲ್ಲಿ ಶುಕ್ರವಾರ ಪ್ರಕಟಿಸಿದ್ದಾರೆ. ‘ಜೀವನದ ಮುಂದಿನ ಹಂತಕ್ಕೆ ಸಾಗಲು ಇದು ಸೂಕ್ತ ಸಮಯ. ನನ್ನ ವೃತ್ತಿ ಬದುಕಿನುದ್ದಕ್ಕೂ ಪ್ರೀತಿ ನೀಡಿ ಬೆಂಬಲಿಸಿ, ಪ್ರೇರೇಪಿಸಿದ ಪ್ರತಿಯೊಬ್ಬರೂ ನನ್ನಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

 

 

ಓಜಾ 2008 ರಲ್ಲಿ ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್‌ ಪಂದ್ಯದ ಮೂಲಕ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲದೆ ವಿಶ್ವ ಟಿ 20 ಪಂದ್ಯಾವಳಿಯಲ್ಲಿ ಸಹ ಬಾಂಗ್ಲಾ ವಿರುದ್ಧ ಅವರ ಮೊದಲ ಅಂತರಾಷ್ಟ್ರೀಯ ಟಿ 20 ಪಂದ್ಯವಾಗಿತ್ತು. , ಅಲ್ಲಿ ಅವರು ನಾಲ್ಕು ವಿಕೆಟ್‌ಗಳನ್ನು ಗಳಿಸಿ ಪಂದ್ಯಶ್ರೇಷ್ಠರಾಗಿ ಗುರುತಿಸಿಕೊಂಡಿದ್ದರು.

2013ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಸಚಿನ್‌ ತೆಂಡೂಲ್ಕರ್‌ ಅವರ ವಿದಾಯದ ಟೆಸ್ಟ್‌ ಪಂದ್ಯವೇ ಓಜಾ ಅವರ ಪಾಲಿಗೂ ಭಾರತ ತಂಡದ ಪರ ಕೊನೆಯ ಟೆಸ್ಟ್‌ ಪಂದ್ಯವಾಗಿದೆ. 2009ರಿಂದ 2013ರವರೆಗೆ ಭಾರತ ತಂಡದ ಪರ 24 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಓಜಾ ಗಮನಾರ್ಹ 113 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನದಲ್ಲಿ 21 ವಿಕೆಟ್ ಪಡೆದುಕೊಂಡಿದ್ದಾರೆ.

 

 

‘ಜೀವನದ ಮುಂದಿನ ಹಂತಕ್ಕೆ ಸಾಗುವ ಸಮಯ ಇದು. ಅಂತರರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಘೋಷಿಸಲು ಈ ಪತ್ರವನ್ನು ಬರೆಯುತ್ತಿರುವೆ. ಭಾರತದ ಕ್ರಿಕೆಟ್‌ ಆಟಗಾರನಾಗಿ ಗುರುತಿಸಿಕೊಂಡಿರುವುದು ನನ್ನ ಅದೃಷ್ಟ. ಭಾರತ ತಂಡವನ್ನು ಪ್ರತಿನಿಧಿಸುವ ಬಾಲ್ಯದ ಕನಸು ನನಸಾಗಿದೆ. ನನ್ನ ಅನುಭವವನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ. ತಂಡದಲ್ಲಿ ನಾನು ಆಡುವಾಗ ಜೊತೆಗಿದ್ದ ಆಟಗಾರರ ಪ್ರೀತಿ, ಸ್ನೇಹವು ಅಮೂಲ್ಯವಾದದ್ದು. ಪ್ರತಿಯೊಬ್ಬರೂ ಬೆಳವಣಿಗೆಗೆ ಹುರಿದುಂಬಿಸಿದವರು’ ಎಂದು ಟ್ವೀಟ್ ಮಾಡಿದ್ದಾರೆ.

‘ಸಚಿನ್ ತೆಂಡೂಲ್ಕರ್ ಅವರಿಂದ ಟೆಸ್ಟ್ ಕ್ಯಾಪ್ ಪಡೆದಿದ್ದು ಮರೆಯಲಾಗದ ಕ್ಷಣ. ವಿವಿಎಸ್ ಲಕ್ಷ್ಮಣ್ ಹಿರಿಯಣ್ಣನಂತೆ ಮಾರ್ಗದರ್ಶನ ನೀಡಿದವರು. ವೆಂಕಟಪತಿ ರಾಜು ಅವರನ್ನು ಸದಾ ಅನುಕರಿಸಿದ್ದೇನೆ. ಮಹೇಂದ್ರಸಿಂಗ್ ಧೋನಿ ಅವರು ನೀಡಿದ ಅವಕಾಶಗಳು ಮತ್ತು ಹರಭಜನ್ ಸಿಂಗ್ ಅವರ ನಿರಂತರ ಮಾರ್ಗದರ್ಶನದ ಪರಿಣಾಮ ನಾನು ಒಂದಿಷ್ಟು ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಪ್ರಗ್ಯಾನ್ ಕೃತಜ್ಞತೆ ಸಲ್ಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top